ಆಳಂದ: ಯೋಗದ ಕುರಿತು ಎಲ್ಲಡೆ ಜಾಗೃತಿ ಮತ್ತು ಅವಶ್ಯಕತೆ ಹೆಚ್ಚುತ್ತಿದ್ದಂತೆ ತಾಲೂಕಿನಲ್ಲೂ ಸಹ ಯೋಗ ಸಾಧಕರು ಮತ್ತು ಆರಾಧಕರು ಅಲ್ಲಲ್ಲಿ ಬೆಳಕಿಗೆ ಬರುವ ಮೂಲಕ ತಮ್ಮದೆಯಾದ ನಿಟ್ಟಿನಲ್ಲಿ ಸಾಧಕರಾಗಿ, ಆರಾಧಕಾರಗಿ ಹೊರಹೊಮ್ಮಿದ್ದಾರೆ. ಇಂತವರ ಸಾಲಿನಲ್ಲಿ ತಾಲೂಕಿನ ಅಲ್ಲಲ್ಲಿ ಯುವಕ, ಯುವತಿಯರು, ಶಿಕ್ಷಕರು ತಮ್ಮದೆಯಾದ ಛಾಪು ಮೂಡಿಸುವ ಮೂಲಕ ಸಾಧಕರಾಗಿ ಮೆಚ್ಚಿಗೆ ಪಡೆದವರು ಅನೇಕರಿದ್ದಾರೆ.
ಕನಸು ಮನಸಲ್ಲೂ ಯೋಗ ಸಾಧಕಿಯಾಗುವೆ ಎಂದು ಅಂದುಕೊಳ್ಳದ ಹಳ್ಳಿಯ ಹುಡಿಗಿಯೊಬ್ಬಳು ಈಗ ಯೋಗವೇ ಉಸಿರಾಗಿಸಿಕೊಂಡು ರಾಜ್ಯ, ರಾಷ್ಟ್ರಮಟ್ಟದವರೆಗೆ ಸಾಧನೆಯ ಶಿಖರವಾಗಿ ಇತರರಿಗೆ ಹುಬ್ಬೇರಿಸುವಂತೆ ಮಾಡಿದ್ದಾಳೆ.
ತಾಲೂಕಿನ ಕೊಲಹಂಗರಗಾ ಗ್ರಾಮದ ರೈತ ಕುಟುಂಬದ ಶ್ರೀದೇವಿ ಭೀಮರಾಯ ಭಾಲಖೇಡ ಎಂಬುವ ಯುವತಿಯೇ ಮೈಗೂಡಿಸಿಕೊಂಡ ಯೋಗದಿಂದ ಮಾಡಿದ ಸಾಧನೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಂಡವಳು. ಇಷ್ಟಕ್ಕೆ ನಿಲ್ಲದೆ ಜಿಲ್ಲೆಯ ಹೆಸರಾಂತ ಶಾಲೆ, ಕಾಲೇಜುಗಳಲ್ಲಿ ಯೋಗ ಬೋಧಕಿಯಾಗಿದ್ದಾರೆ.
ಸಾಧಕಿ ಶ್ರೀದೇವಿ ಹೇಳುವಂತೆ ಹಳ್ಳಿ ಎಂದ ಕೂಡಲೇ ಕೀಳಾಗಿ ನೋಡುತ್ತಾರೆ. ಅನೇಕರು ಬೇಡಪ್ಪ ನಮ್ಮ ಮಕ್ಕಳು ಹಳ್ಳಿಯಲ್ಲಿ ಓದೊದು ಅಂತಾರೆ, ಮುಖ್ಯವಾಗಿ ಪ್ರತಿಭೆ ಮತ್ತು ಸತತ ಪ್ರಯತ್ನವಿದ್ದರೆ ಹಳ್ಳಿಯಾದರೆನು ದಿಲ್ಲಿಯಾದರೆನ್ನು. ಹಳ್ಳಿಯವರು ಸಹ ನಾವೇನು ಯಾವುದರಲ್ಲೂ ಕಮ್ಮಿಯಿಲ್ಲ ಎಂದು ತೋರಿಸೋಕೆ ಮನಸು ಬೇಕು ಎನ್ನುವ ಶ್ರೀದೇವಿ ಭಾಲಖೇಡ ಅವರು ಶಿಕ್ಷಣ ಸ್ವಗ್ರಾಮ ಕೊಡಲಂಗರಗಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದು ಮುಗಿಸಿ ಹೆಚ್ಚಿನ ವ್ಯಾಸಂಗಕ್ಕಾಗಿ ಪಟ್ಟಣಕ್ಕೆ ತೆರಳಿ ಅಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಯೋಗ ಕುಸುಮ ಮತ್ತು ಯೋಗ ಕಿರಣಗಳಂತ ಸ್ಫರ್ಧೆಗಳಲ್ಲಿ ಸೇರಿ ಇನ್ನಿತರ ಪ್ರಶಸ್ತಿಗಳನ್ನು ಪಡೆದು ಕೀರ್ತಿ ತಂದಿದ್ದಾರೆ.
ಸದ್ಯ ಯೋಗದಲ್ಲಿ ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ಎಂಸಿ ಪೂರೈಸಿದ ಇವರು ಯೋಗವನ್ನೇ ಜೀವನದ ಒಂದು ಭಾಗವಾಗಿಸಿಕೊಂಡು ಹಲವಾರು ಕಡೆ ಯೋಗ ಕಾರ್ಯಕ್ರಮ ತರಬೇತಿಗಳನ್ನು ನಡೆಸಿಕೊಟ್ಟಿದ್ದಾರೆ. ರೋಗಿಗಳಿಗೆ ಮೇಲಾಗಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ಮತ್ತು ಪ್ರಾತ್ಯಕ್ಷಿಕೆ ತೋರಿಸಿಕೊಡುವ ಮೂಲಕ ಮನುಷ್ಯರ ಜೀವನಕ್ಕೆ ಯೋಗದ ಮಹತ್ವ ಮತ್ತು ಜಾಗೃತಿ ಮೂಡಿಸುವಲ್ಲಿ ಎತ್ತಿದ ಕೈ ಇವರದಾಗಿದೆ. ಇಷ್ಟಕ್ಕೆ ಸಾಲದೆಂಬಂತೆ ಆಕಾಶವಾಣಿ ಮತ್ತು ಆಯುಷ್ಯ ವಿಭಾಗದಿಂದ ಆಯೋಜಿಸಿದ ಅಂತರಾಷ್ಟ್ರೀಯ ಯೋಗದಿನದಂತೆ ಅನೇಕ ಕಡೆ ಯೋಗದ ತರಬೇತಿಯನ್ನು ನೀಡಿತ್ತಿದ್ದಾರೆ. ಇಂಥ ಹಳ್ಳಿಯ ಪ್ರತಿಭೆಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬಂದು ಸಾಮಜಕ್ಕೆ ಯೋಗದ ದಾರೆಯೆರೆಯಲು ಸಮಾಜ ಮತ್ತು ಸರ್ಕಾರ ಪ್ರೋತ್ಸಾಹಿಸುವ ಮೂಲಕ ಯೋಗದ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವುದು ಇಂದಿನ ಅಗತ್ಯವಾಗಿದೆ.