ಹುಬ್ಬಳ್ಳಿ: ಕಳೆದ ಮೂರು ದಿನಗಳಲ್ಲಿ ತಾಪಮಾನ ಹಠಾತ್ ಏರಿಕೆಯಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ಏರಿಕೆಯಾಗಿದೆ.
ಅನೇಕ ಜಿಲ್ಲೆಗಳಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕ ತಾಪಮಾನ ಹಗಲು ಹೊತ್ತಿನಲ್ಲಿ ದಾಖಲಾಗಿದೆ. ಇನ್ನೂ ನಾಲ್ಕು ದಿನ ಇದೇ ರೀತಿ ಹಗಲು ಹೊತ್ತಿನಲ್ಲಿ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆಯಿದ್ದು, ಈ ಬದಲಾವಣೆ ಪರಿಣಾಮಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಉತ್ತರ ಕರ್ನಾಟಕ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ, ಧಾರವಾಡ ಕೃಷಿ ವಿವಿ ಹಾಗೂ ಭಾರತ ಹವಾಮಾನ ಇಲಾಖೆ ಮಾಹಿತಿ ನೀಡಿವೆ.
ಮೂರು ದಿನ ಸರಾಸರಿ ಮುನ್ಸೂಚನೆ ಪ್ರಕಾರ ಕಲಬುರ್ಗಿಯಲ್ಲಿ 37, ಧಾರವಾಡದಲ್ಲಿ 37, ರಾಯಚೂರು, 36, ವಿಜಯಪುರ 35, ಕೊಪ್ಪಳ 36, ಉತ್ತರ ಕನ್ನಡ 35 ಬೀದರ್ 34 , ಬಾಗಲಕೋಟೆ 34.5, ಹಾವೇರಿ35, ಬೆಳಗಾವಿ 33 , ಬಳ್ಳಾರಿ 38 ಯಾದಗಿರಿ 37 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುನ್ನೆಚ್ಚರಿಕೆ ಕ್ರಮ ಶಿಫಾರಸ್ಸು: ಸಾಕಷ್ಟು ನೀರು ಕುಡಿಯಬೇಕು, ಎಳನೀರು ಕುಡಿಯಬೇಕು, ಮನೆಯಲ್ಲಿ ತಯಾರಿಸಿದ ಲಿಂಬೆ ರಸ , ಲಸ್ಸಿ ಸೇವಿಸಬೇಕು, ಹತ್ತಿ ಬಟ್ಟೆಗಳನ್ನು ಆದಷ್ಟು ಹೆಚ್ಚು ಧರಿಸಬೇಕು, ಸಾಕು ಪ್ರಾಣಿಗಳಿಗೆ ನೆರಳು, ನೀರಿನ ವ್ಯವಸ್ಥೆ ಮಾಡಬೇಕು ಎಂದು ಹವಾಮಾನ ಮುನ್ಸೂಚನಾ ಸಂಸ್ಥೆಗಳು ಶಿಫಾರಸ್ಸು ಮಾಡಿವೆ.