ಶಹಾಬಾದ: ಕರ್ನಾಟಕ ಪೌರಸಭೆಗಳ ಅಧಿನಿಯಮ, ೧೯೬೪ ತಿದ್ದುಪಡಿಯಾದಂತೆ ೨೦೨೧-೨೨ ಸಾಲಿನಿಂದ ನಗರಸಭೆಯ ಆಸ್ತಿ ತೆರಿಗೆ ಹೆಚ್ಚಳ ಸಂಬಂಧಿಸಿದಂತೆ ನಗರಸಭೆಯಲ್ಲಿ ಮಂಗಳವಾರ ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮನ್ಯ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಅನುಮೋದನೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಬೇಕಾದರೆ ಅದಕ್ಕೆ ತೆರಿಗೆ ಹರಿದು ಬರಬೇಕು.ನಗರದ ಅಭಿವೃದ್ಧಿಗೆ ತಕ್ಕಂತೆ ತೆರಿಗೆ ಸಂಗ್ರಹವಾಗುತ್ತಿಲ್ಲ. ತೆರಿಗೆಯಿಂದಲೇ ನಗರವನ್ನು ಅಭಿವೃದ್ಧಿಗೊಳಿಸಬಹುದು.ಆ ನಿಟ್ಟಿನಲ್ಲಿ ಸರ್ಕಾರದ ಸುತ್ತೊಲೆ ಪ್ರಕಾರ ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ವಿದ್ಯುತ್ ಕಂಬಗಳ ಅಳವಡಿಸಲು ಜೆಸ್ಕಾಂ ಅಧಿಕಾರಿಗಳಿಗೆ ಕರವೇ ಮನವಿ
ಅಲ್ಲದೇ ಖಾಲಿ ನಿವೇಶನಕ್ಕೆ ಶೇ ೦.೨ ದಿಂದ ಶೇ ೦.೫ಕ್ಕಿಂತ ಹೆಚ್ಚಿಗೆ ಇಲ್ಲದಂತೆ, ವಾಸದ ಮತ್ತು ವಾಣಿಜ್ಯ ಇತರ ಕಟ್ಟಡಗಳಿಗೆ ಸ್ವತ್ತು ತೆರಿಗೆ ಶೇ ೦.೨ ದಿಂದ ಶೇ೧.೫ ಕ್ಕಿಂತ ಹೆಚ್ಚಿಗೆ ಇಲ್ಲದಂತೆ ವಿಧಿಸಬೇಕಾಗಿದೆ ಎಂದರು.ಅದಕ್ಕೆ ನಗರಸಭೆಯ ಸದಸ್ಯ ರವಿ ರಾಠೋಡ ಮಾತನಾಡಿ, ಈಗಾಗಲೇ ಕೊರೊನಾ ಸಂಕಷ್ಟದಿಂದ ಜನರು ತೊಂದರೆಗೆ ಒಳಗಾಗಿದ್ದಾರೆ.ಅವರ ಮೇಲೆ ಮತ್ತೆ ಬರೆ ಎಳೆದಂತಾಗುತ್ತದೆ ಎಂದರು.
ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಹಾಗೂ ರಜನಿಕಾಂತ ಕಂಬಾನೂರ ಮಾತನಾಡಿ, ನಗರದ ಮುಖ್ಯ ಮಾರುಕಟ್ಟೆಗಳಲ್ಲಿ ಹಾಗೂ ವಾಣಿಜ್ಯ ಮಳಿಗೆಯವರು ತೆರಿಗೆಯನ್ನು ಕಟ್ಟುತ್ತಿಲ್ಲ.ಈ ಬಗ್ಗೆ ಅಧಿಕಾರಿಗಳಾದ ತಾವು ಏನು ಮಾಡುತ್ತಿದ್ದೀರಿ.ಮೊದಲು ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.ಅಲ್ಲದೇ ಆಸ್ತಿ ತೆರಿಗೆ ತಿದ್ದುಪಡಿಯಾದ ಬಗ್ಗೆ ಸರಿಯಾದ ಮಾಹಿತಿ ಒದಗಿಸುವಂತೆ ಸರ್ವ ಸದಸ್ಯರು ಒತ್ತಾಯಿಸಿದರು.
ಅಕ್ರಮ ಸ್ಪೋಟಕ ಸಂಗ್ರಹ ಸ್ಥಳಕ್ಕೆ ಜಿಲ್ಲಾ ಕಲ್ಲು ಗಣಿಗಾರಿಕೆ ನಿಯಂತ್ರಣ ಸಮಿತಿ ಭೇಟಿ
ನಂತರ ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ ಅವರು ಆಸ್ತಿ ತೆರಿಗೆ ಹೆಚ್ಚಳ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡಿದರು. ನಂತರ ಸರ್ವ ಸದಸ್ಯರು ಕೋವಿಡ್ ಸಂಕಷ್ಟದ ಕಾಲದಲ್ಲಿ ಜನರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸರ್ವಾನುಮತದೊಂದಿಗೆ ಅನುಮೋದನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ನಗರಸಭೆಯ ಸರ್ವ ಸದಸ್ಯರು, ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ, ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ ಸೇರಿದಂತೆ ಅನೇಕರು ಹಾಜರಿದ್ದರು.