ಯಾದರಿಗಿ: ಸುರಪುರ ತಾಲೂಕಿನ ಯಡಿಯಾಪುರ ಗ್ರಾಮದ ರೈತ ಮಲ್ಲನಗೌಡ ಬಿರಾದಾರ್‌ನ ಮೃತ ದೇಹ ಗುರುವಾರ ಸಂಜೆ ಮಾಚಗುಂಡಾಳ ಬಳಿಯ ಕಾಲುವೆಯಲ್ಲಿ ಸಿಕ್ಕಿತ್ತು,ಆಗ ಆಕಸ್ಮಿಕ ಸಾವು ಎಂದೇ ಭಾವಿಸಲಾಗಿತ್ತು,ಆದರೆ ಮಲ್ಲನಗೌಡ ಸಾವಿಗೆ ಸಾಲ ಕಾರಣ ಎಂಬುದು ಈಗ ಮನೆಯವರಿಂದ ತಿಳಿದುಬಂದಿದೆ.
ಗುರುವಾರ ರಾತ್ರಿ ಸುರಪುರ ಪೊಲೀಸ್ ಠಾಣೆಗೆ ಬಂದು ಮೃತನ ಪತ್ನಿ ರೇಖಾ ಎಂಬುವವರು ದೂರು ನೀಡಿದ್ದು, ನನ್ನ ಪತಿಯಾದ ಮಲ್ಲನಗೌಡ ಬಿರಾದಾರ್‌ಗೆ ಕೆನರಾ ಬ್ಯಾಂಕ್‌ಲ್ಲಿ ೬ ಲಕ್ಷ ಮತ್ತು ಸಂಬಂಧಿಕರ ಬಳಿ ೪ ಲಕ್ಷ ಸಾಲ ಮಾಡಿಕೊಂಡಿದ್ದ,ಇದರ ಕುರಿತು ಚಿಂತೆಗೀಡಾಗಿದ್ದ.
ಈ ವರ್ಷ ಬೆಳೆಯು ಸರಿಯಾಗಿ ಬಾರದ ಕಾರಣ ಸಾಲ ತೀರಿಸುವ ಕುರಿತು ಸದಾಕಾಲ ಚಿಂತೆ ಮಾಡುತ್ತಿದ್ದ ಆದರೆ ನಾವು ಚಿಂತೆ ಮಾಡುವುದು ಬೇಡ ಹೇಗಾದರು ತೀರಿಸೋಣ ಎಂದು ಧೈರ್ಯ ಹೇಳುತ್ತಿದ್ದೇವು,ಆದರೆ ಸಾಲಕ್ಕೆ ಹೆದರಿ ನನ್ನ ತವರು ಮನೆಯಾದ ಕೆಂಭಾವಿಯ ಸಂಜೀವ ನಗರ ಕ್ರಾಸ್ ಮನೆಗೆ ಬಂದು ನಂತರ ಗುರುವಾರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಕೆಂಭಾವಿಯ ಹೆಮ್ಮರಡ್ಡಿ ಮಲ್ಲಮ್ಮ ದೇವಸ್ಥಾನದ ಹಿಂಬಾಗದಲ್ಲಿರುವ ಕಾಲುವೆಗೆ ಹಾರಿದ್ದಾನೆ.
ಆತನಿಗೆ ಈಜು ಬರುತ್ತಿರಲಿಲ್ಲ.ಸಾಲದಿಂದ ನೊಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೀಡಿರುವ ಹೇಳಿಕೆ ಆಧರಿಸಿ ಸುರಪುರ ಠಾಣೆಯಲ್ಲಿ ದೂರು ದಾಖಲಾಗಿದೆ.