ಬೆಂಗಳೂರು: ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಕೇಳಿಬಂದಿದೆ. ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿಸುತ್ತಿರುವ ಬೆನ್ನಲ್ಲೇ ನಿಗಮಕ್ಕೆ ಲಿಂಗಾಯತ ಎಂಬ ಹೆಸರನ್ನು ಮಾತ್ರ ಬಳಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.
ಬಸವ ಸಮಿತಿಯ ಅರಿವಿನ ಮನೆಯಲ್ಲಿ ಇಂದು ನಡೆದ ಬಸುದ್ದಿಗೋಷ್ಠಿಯಲ್ಲಿ ಗದಗ ಡಂಬಳ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿರಶೈವ ಲಿಂಗಾಯತ ನಿಗಮ ಮಂಡಳಿ ಸ್ಥಾಪಿಸುವ ಕುರಿತು ಕಾಂಗ್ರೆಸ್ ನಾಯಕರು ಸಭೆ ಮಾಡಿದ್ದು, ಇದಕ್ಕೆ ನಮ್ಮ ತಕರಾರಿಲ್ಲ. ಅದರೆ, ವೀರಶೈವ ಲಿಂಗಾಯತ ಎಂದು ಎಲ್ಲೂ ಇಲ್ಲ ಹೀಗಾಗಿ ಹೆಸರನ್ನು ಲಿಂಗಾಯತ ಎಂದು ಬದಲಿಸಬೇಕು. ವೀರಶೈವ ಎನ್ನುವುದೇ ಇಲ್ಲದಿದ್ದಾಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಎಂಬ ಹೆಸರನ್ನೇಕೆ ಇಡಬೇಕು ಎಂದು ಪ್ರಶ್ನಿಸಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಮುಗಿದ ಅಧ್ಯಾಯ ಎಂದು ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಸುಳ್ಳು ಲಿಂಗಾಯತರ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲಿಂಗಾಯತ ಹೋರಾಟ ಮುಗಿದ ಅಧ್ಯಾಯ ಎಂಬುದು ಕಾಂಗ್ರೆಸ್ ಪಕ್ಷದ ಹೇಳಿಕೆ ಅಗಿರಬಹುದು. ಅದರೆ, ಸ್ವತಂತ್ರ ಧರ್ಮದ ಹೋರಾಟ ನಮ್ಮ ಅಸ್ಮಿತೆ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸಿದ್ದರಾಮ ಸ್ವಾಮೀಜಿ ತಿಳಿಸಿದರು.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಿಗಮ ಮಂಡಳಿ ಸ್ಥಾಪನೆ ಮಾಡಿ ಲಿಂಗಾಯತ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಮುಂದಾಗಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇದೆ. ಆದರೆ ಸ್ವತಂತ್ರ ಧರ್ಮದ ಹೋರಾಟಕ್ಕೂ ನಿಗಮ ಮಂಡಳಿ ಸ್ಥಾಪನೆಗೂ ಸಂಬಂಧವಿಲ್ಲ. ಕಾಂಗ್ರಸ್ ಪಕ್ಷದ ಕೆಲ ಲಿಂಗಾಯತ ನಾಯಕರು ಈ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಲಿಂಗಾಯತ ಧರ್ಮದ ಹೋರಾಟ ನಿರಂತರವಾಗಿರುತ್ತದೆ. ನಿಗಮ ಮಂಡಳಿಗೂ ಸಹ ವೀರಶೈವ ಎನ್ನುವುದನ್ನು ಬಿಟ್ಟು ಲಿಂಗಾಯತ ಅಭಿವೃದ್ಧಿ ನಿಗಮ ಎಂದು ಸ್ಥಾಪಿಸಿ ಎಂದು ಸಲಹೆ ನೀಡಿದ್ದಾರೆ.
ಎಲ್ಲೂ ಉಲ್ಲೇಖವಾಗಿಲ್ಲ
ಮಂಡಲ್ ವರದಿಯಲ್ಲಿ ಲಿಂಗಾಯತದ ಕುರಿತು ಪ್ರಸ್ತಾಪವಾಗಿಲ್ಲ. 30 ಪಂಗಡಗಳನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿತ್ತು. ಉಳಿದ 90 ಪಂಗಡಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂಬ ಒತ್ತಡ ನಮ್ಮದಾಗಿದೆ. ಲಿಂಗಾಯತ ಗಾಣಿಗ, ನೇಕಾರ ಲಿಂಗಾಯತ, ಬಡಿಗ ಲಿಂಗಾಯತ ಸೇರಿದಂತೆ 30 ಪಂಗಡಗಳಿಗೆ ಲಿಂಗಾಯತ ಎಂದೇ ಸೇರಿಸಿದ್ದಾರೆ. ಯಾವ ಜಾತಿಯಲ್ಲೂ ವೀರಶೈವ ಲಿಂಗಾಯತ ಎಂದು ಉಲ್ಲೇಖವಾಗಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಸ್ಪಷ್ಟಪಡಿಸಿದ್ದಾರೆ.
ವೀರಶೈವವನ್ನು ಉಪಪಂಗಡವಾಗಿ ನಾವು ಗೌರವಿಸುತ್ತೇವೆ. ಆದರೆ, ತಾವೇ ಜಾತಿ ಹುಟ್ಟುಹಾಕಿದವರು, ಬಸವಣ್ಣ ಶಿಷ್ಯ ಎಂದರೆ ನಾವು ಒಪ್ಪುವುದಿಲ್ಲ. ಈ ಕುರಿತು ಬಹುತೇಕ ಜನರಿಗೆ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಇದೀಗ ಮತ್ತೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ ಎಂದರೆ, ಅವರೇನು ಹುಚ್ಚರಾ? 2002ರ ಗೆಜೆಟ್ ನೋಟಿಫಿಕೇಷನ್ ಸರ್ಕಾರ ಹಿಂಪಡೆಯಬೇಕು. ಇಲ್ಲವಾದಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಲೂ ಸಿದ್ಧ. ಈ ಕುರಿತು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬೇಡಿ ಎಂದು ಜಾಮದಾರ್ ಮನವಿ ಮಾಡಿದರು.