ಕಲಬುರಗಿ: ಕನ್ನಡದ ಹೆಸರಾಂತ ರಂಗಕರ್ಮಿ ಸಿ.ಜಿ.ಕೆ.ಯವರ ಜನ್ಮ ದಿನದ ನಿಮಿತ್ತ ಜೂನ್ 27 ರಂದು ಸಿ.ಜಿ.ಕೆ. ಬೀದಿರಂಗ ದಿನವನ್ನಾಗಿ ನಗರದ ಕನ್ನಡ ಭವನದಲ್ಲಿ ಸಂಜೆ 5.00ಕ್ಕೆ ಆಚರಣೆ ಮಾಡಲಾಗುತ್ತದೆ ಎಂದು ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ನಯನಾ ಬಿ. ಅವರು ತಿಳಿಸಿದ್ದಾರೆ.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸಿ.ಜಿ.ಕೆ.ಯವರ ಜನ್ಮ ದಿನದ ಆಚರಿಸಲಾಗುತ್ತದ್ದು, ಸಿ.ಜಿ.ಕೆ.ಯವರ ರಂಗಪ್ರಜ್ಞೆಯನ್ನು ಬಲ್ಲ ಗೆಳೆಯರು, ರಂಗಕರ್ಮಿಗಳು, ಸಂಘಟನೆಗಳು ಅವರ ಹುಟ್ಟುಹಬ್ಬದ ದಿನದಂದು ಪಾಲ್ಗೊಂಡು, ಸಮಾನ ಮನಸ್ಕರಾದ ಜನರೊಂದಿಗೆ ಬೆರೆತು ಕಾರ್ಯಕ್ರಮದ ಮೂಲಕ ಈ ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಕಲಾವಿದರಿಗೆ ಸಿ.ಜಿ.ಕೆ. ರಂಗ ಪುರಸ್ಕಾರ ನೀಡಲಾಗುವುದು ಎಂದರು.
ಹೊಸ ಸವಾಲುಗಳನ್ನು ಚರ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಸಾಲಿನ ಸಿ.ಜಿ.ಕೆ. ರಂಗ ಪುರಸ್ಕಾರವನ್ನು ಖ್ಯಾತ ನಾಟಕಕಾರ ಮತ್ತು ಕಥೆಗಾರ ಮಹಾಂತೇಶ ನವಲಕಲ್ ಅವರಿಗೆ ನೀಡಲಾಗುವದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿಗಳು ಮತ್ತು ಎನ್.ವಿ. ಡಿಗ್ರಿ ಕಾಲೇಜಿನ ಪ್ರಾಚಾರ್ಯರಾದ ಡಾ. ಹೇಮಂತಕುಮಾರ ಎಸ್. ಕೊಲ್ಲಾಪೂರ ವಹಿಸುವರು. ಸಾಹಿತಿ ಮತ್ತು ಪತ್ರಕರ್ತ ಮಹಿಪಾಲರೆಡ್ಡಿ ಮೂನ್ನೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂದೀಪ ಬಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ ಪಿ. ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಕಲಬುರಗಿಯ ಹಿರಿಯ ರಂಗ ಕಲಾವಿದರಾದ ಸಂಗಯ್ಯ ಹಳ್ಳದಮಠ ಅವರು ರಂಗಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.