ಮತ್ತೆ ಬುಗಿಲೆದ್ದ ಲಿಂಗಾಯತ ಧರ್ಮ ಮಾನ್ಯತೆ !

0
462

ಇದುವರೆಗೆ ಬೂದಿ ಮುಚ್ಚಿ ಕೆಂಡದಂತೆ ಒಳಗೊಳಗೆ ಸುಳಿಯುತ್ತಿದ್ದ ಲಿಂಗಾಯತ ಧರ್ಮ ಹೋರಾಟದ ಅಸ್ಮಿತೆಯ ಪ್ರಶ್ನೆ ಮತ್ತೆ ಬುಗಿಲೆದಿದೆ. ತೀರಾ ಇತ್ತೀಚೆಗೆ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ ಹಾಗೂ ಕೆಲವು ಜನ ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯನ್ನು ಭೇಟಿಯಾಗಿ ವೀರಶೈವ/ಲಿಂಗಾಯತ ಧರ್ಮದ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕೆಂದು ಮನವಿ ಮಾಡಿದರು. ಸರಕಾರಕ್ಕೆ ಸಲ್ಲಿಸಿದ ಮನವಿಯವನ್ನು ಗಮನಿಸಿದ ಜಾಗತಿಕ ಲಿಂಗಾಯತ ಮಹಾಸಭೆ ದಿಡೀರನೆ ತನ್ನ ಮಹಾಮಂಡಳದ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಪತ್ರಿಕಾ ಹೇಳಿಕೆ ನೀಡಿದೆ.

ವೀರಶೈವ ಮಹಾಸಭೆ ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆಯ ಬಗೆಗೆ ನಮಗೆ ಯಾವುದೆ ತಕರಾರು ಇಲ್ಲ. ಆದರೆ ಆ ಬೇಡಿಕೆಯಲ್ಲಿ ವೀರಶೈವ ಪದ ಸೇರಿಸಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭೆ ಕಟುವಾಗಿ ಟೀಕಿಸಿದೆ. 2002 ಕ್ಕೂ ಪೂರ್ವದಲ್ಲಿ ಸರಕಾರದ ಯಾವುದೆ ದಾಖಲೆಯಲ್ಲಿ ಇಲ್ಲದ ವೀರಶೈವ ಪದವನ್ನು ಸೇರಿಸಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡಿದೆ. ನಿಜಕ್ಕೂ ಬ್ರಿಟಿಷ್ ಆಡಳಿತದ ಸಂದರ್ಭದಿಂದ ಹಿಡಿದು ಸರಕಾರದ ಯಾವ ದಾಖಲೆಯಲ್ಲಿಯೂ ಇಲ್ಲದ ವೀರಶೈವ ಪದವನ್ನು ಅಂದಿನ ವೀರಶೈವ ಮಹಾಸಭೆಯ ಅಧ್ಯಕ್ಷ ಭೀಮಣ್ಣ ಖಂಡ್ರೆಯವರ ಕುತಂತ್ರದಿಂದ ಸರಕಾರದ ನೋಟಿಫಿಕೇಶನ್ ಪಡೆಯಿತು. ಇದಕ್ಕೆ ಬಹು ಮುಖ್ಯ ಕಾರಣ ಭೀಮಣ್ಣ ಖಂಡ್ರೆ ಹಾಗೂ ವೀರಶೈವ ಮಹಾಸಭೆಯ ಕುತಂತ್ರವೆನ್ನದೆ ವಿಧಿಇಲ್ಲವಾಗಿದೆ.

Contact Your\'s Advertisement; 9902492681

ವೀರಶೈವ ಎಂಬುದು ಲಿಂಗಾಯತ ಧರ್ಮದಲ್ಲಿ ಕೇವಲ ಒಂದು ಮತ. ಮತ ಹೇಗೆ ಧರ್ಮವಾಗುತ್ತದೆ ? ಎಂಬುದು ಬಹಳಷ್ಟು ಜನ ಹೋರಾಟಗಾರರ ಪ್ರಶ್ನೆ ಪ್ರಸ್ತುತವಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ವಚನಗಳ ಎಳೆಯನ್ನು ಇಟ್ಟುಕೊಂಡು ಜನ್ಮ ತಳೆದ ಲಿಂಗಾಯತ ಧರ್ಮ, ಕರ್ಮಠರ ಕಪಿಮುಷ್ಠಿ ಮತ್ತು ಧಾರ್ಮಿಕ ಅತ್ಯಾಚಾರಿಗಳ ಕೈಯಲ್ಲಿ ನಲುಗಿ ಹೋದದ್ದು ಸುಳ್ಳಲ್ಲ. ಬಸವಣ್ಣನವರು ಇದ್ದಾಗ ಹೇಗೆ ಪುರೋಹಿತಶಾಹಿ ಅವರ ವಿಚಾರಗಳ ಮೇಲೆ ಬರ್ಬರ ಹತ್ಯೆ ನಡೆಸಲು ಯತ್ನಿಸಿದಂತೆ, ಈಗಲೂ ಅದನ್ನು ದಮನ ಮಾಡಲು ಸನ್ನದ್ದವಾಗಿ ನಿಂತುಕೊಂಡಿದೆ.

ಲಿಂಗಾಯತ ಧರ್ಮಕ್ಕೆ ಸಂಬಂಧವೇ ಪಡದ ಕಲ್ಲಡ್ಕ ಪ್ರಭಾಕರ ಭಟ್ಟ, ಆರ್.ಎಸ್.ಎಸ್.ನ ಸಂತೋಷ, ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಹಾಗೂ ಧಾರ್ಮಿಕ ವಲಯದ ಭಯೋತ್ಪಾದಕ ಎಂದೆ ಗುರುತಿಸಿಕೊಂಡಿರುವ ಪೇಜಾವರ ಮಹಾಸ್ವಾಮಿಗಳು ಸುಖಾ ಸುಮ್ಮನೆ ಮಾತನಾಡುತ್ತಾರೆ. ಲಿಂಗಾಯತ ಧರ್ಮ ಅಥವಾ ವಚನ ಸಾಹಿತ್ಯದ ಬಗೆಗೆ ಎಳ್ಳಷ್ಟು ಗೊತ್ತಿಲ್ಲದ ಇವರುಗಳು ತಲೆ ಬುಡವಿಲ್ಲದೆ ಆಳಿಗೊಂದು ಮಾತಾಡಿ ಲಿಂಗಾಯತರ ದಿಕ್ಕು ತಪ್ಪಿಸಲು ಹೊರಟಿದ್ದಾರೆ.

ಕೆಲವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಂತೂ ಕೈತೊಳೆದುಕೊಂಡು ಬೆನ್ನು ಹತ್ತಿದವರಂತೆ ಮತ್ತೆ ಶುರುವಾದ ಪ್ರತ್ಯೇಕ ಧರ್ಮದ ಕೂಗು ಎಂದು ಉಯಿಲೆಬ್ಬಿಸಿ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಲಿಂಗಾಯತ ಧರ್ಮದ ಗಂಧಗಾಳಿ ಗೊತ್ತಿಲ್ಲದ ಇವು ಕಾಕೊಳಿಯಾಗಿಯೂ ನವಿಲಿನಂತೆ ನರ್ತಿಸುವ ಸೋಜಿಗ ಎಂಥವರಿಗೂ ಗೊತ್ತಾಗುತ್ತಿದೆ.
ಇಷ್ಟಕ್ಕೂ ಲಿಂಗಾಯತ ಧರ್ಮದ ಹೋರಾಟಕ್ಕೆ ಬಹುತೇಕ ರಾಜಕಾರಣಿಗಳು, ಧಾರ್ಮಿಕ, ಮುಖಂಡರು, ಸ್ವಹಿತಾಸಕ್ತಿ ಗುಂಪುಗಳು ಯಾಕೆ ವಿರೋಧಿಸುತ್ತಿವೆ ? ಎಂಬ ಪ್ರಶ್ನೆಯನ್ನು ಎತ್ತಿಕೊಂಡರೆ ಅದಕ್ಕೊಂದು ತಾರ್ಕಿಕ ಉತ್ತರ ದೊರೆಯುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮ ಕಾಯಕ ಜೀವಿಗಳ ಸಂಘಟನೆ. ಇಲ್ಲಿ ಅವರವರ ಕಾಯಕದ ಅನುಭವವೆ ಪ್ರಮಾಣು. ಶಾಸ್ತ್ರ, ಪುರಾಣ,ವೇದಾಂತಗಳೆಲ್ಲ ಕಟ್ಟುಕತೆಗಳು ಎಂಬುದು ಅವರಿಗೆಲ್ಲ ಮನದಟ್ಟಾಗಿತ್ತು. ವೇದವೆಂಬುದು ಓದಿನ ಮಾತು ಎಂಬುದು ಖಚಿತ. ವೇದ ಶಾಸ್ತ್ರ ಪುರಾಣ ಪ್ರಾಮಣ್ಯ ಒಪ್ಪದ ದುಡಿಯುವ ಜನ ತಮಗಾಗಿ ಕಟ್ಟಿಕೊಂಡ ಚಳುವಳಿಯ ಹೆಸರು ಲಿಂಗಾಯತ. ದುಡಿಯುವ, ಶ್ರಮಿಕ ವರ್ಗ ಎಚ್ಚೆತ್ತರೆ ಪಟ್ಟಭದ್ರ ಧಾರ್ಮಿಕ, ರಾಜಕೀಯ, ಸಾಮಾಜಿಕ ಸೋಗಲಾಡಿಗಳಿಗೆ ಚಡ್ಡಿಯ ಲಾಡಿ ಬಿಚ್ಚಿದಂತೆ ಆಗುತ್ತದೆ.

ಹೀಗಾಗಿ ಹನ್ನೆರಡನೆಯ ಶತಮಾನದಿಂದ ಇಲ್ಲಿಯವರೆಗೂ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಮರೆ ಮಾಡುತ್ತಲೆ ಬಂದಿದೆ. ತೀರಾ ಇತ್ತೀಚೆಗೆ ಲಿಂಗಾಯತ ಧರ್ಮಿಯರಿಗೆ ವಚನ ಪ್ರಜ್ಞೆ ಮೂಡುತ್ತಿರುವಂತೆ ಮತ್ತೆ ಮತ್ತೆ ಹೋರಾಟದ ಕಿಚ್ಚು ಹುಟ್ಟಿಕೊಂಡಿದೆ. ಇದು ಯಾವುದೋ ರಾಜಕೀಯ ಒತ್ತಡಗಳಿಂದ ಪ್ರೇರಿತವಾದ ಕಿಚ್ಚಾಗಿದ್ದರೆ ಇಷ್ಟೊತ್ತಿಗೆ ಅದು ತಣ್ಣಗಾಗಿ ಹಳೆ ಕತೆಯಾಗುತ್ತಿತ್ತು. ಒಡಲಿನಿಂದ ಹೊಮ್ಮಿದ ಹೋರಾಟ ಯಾರೋ ನಾಲ್ಕು ಜನ ಪಡಪೋಶಿಗಳ ಮಾತಿಗೆ ತಲೆ ಬಾಗಿಸುವುದಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದ ಮೊಟ್ಟ ಮೊದಲ ಕನ್ನಡದ ಧರ್ಮ ಲಿಂಗಾಯತ. ಈ ಲಿಂಗಾಯತಕ್ಕೆ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಹೊಲಿಯರ ನಾಗಿದೇವ, ಸೂಳೆ ಸಂಕವ್ವೆ, ಅಕ್ಕಮಹಾದೇವಿ, ಅಲ್ಲಮಪ್ರಭು,ಚೆನ್ನಬಸವಣ್ಣ, ಕದಿರೆಯ ರೆಮ್ಮವ್ವ ಮುಂತಾದವರೆಲ್ಲ ಬಸವಣ್ಣನವರ ನೇತೃತ್ವದಲ್ಲಿ ಕಟ್ಟಿದ ಅನುಭಾವಿಕ ಚಳುವಳಿ. ನಮ್ಮ ನಾಡಿದ ವಿಸ್ಮøತಿ ಅಡಗಿರುವುದು ವಚನ ಸಾಹಿತ್ಯದ ಅನುಭಾವದ ಒಡಲಲ್ಲಿ ಎಂಬುದನ್ನು ಯಾರೂ ಮರೆಯುವಂತೆ ಇಲ್ಲ.

ಏಕಕಾಲಕ್ಕೆ ಪುರೋಹಿತಶಾಹಿ, ರಾಜಶಾಹಿ, ಮತ್ತು ಪಟ್ಟಭದ್ರರ ವಿರುದ್ಧ ಸಿಡಿದ ಸಿಡಿಗುಂಡುಗಳು ವಚನ ಸಾಹಿತ್ಯ. ವಚನ ಸಾಹಿತ್ಯದ ಪ್ರಜ್ಞೆ ಎಂದರೆ ಅದು ಸಕಲ ಜೀವಾತ್ಮರಿಗೆ ಲೇಸ ಬಯಸುವ ಪ್ರಜ್ಞೆ. ಈ ಪ್ರಜ್ಞೆ ಎಲ್ಲರಲ್ಲಿ ಮೂಡಿದರೆ ತಮ್ಮ ಕರಾಳ ಕೆಲಸಗಳಿಗೆ, ಧರ್ಮದ ಹೆಸರಿನ ನಂಗಾನಾಚ ಬಯಲಾಗಬಾರದು ಎಂಬುದು ಬಹುತೇಕರ ವಾಂಛೆ. ಆದ್ದರಿಂದಲೆ ಲಿಂಗಾಯತ ಧರ್ಮದ ಹೋರಾಟವನ್ನು ರಾಜಕೀಯ ಹೋರಾಟ ಎಂದು ದಿಕ್ಕು ತಪ್ಪಿಸಲು ಯತ್ನಿಸಿದರು. ಕೆಲವರಂತೂ ಧರ್ಮ ಒಡೆಯುವ ಷಡ್ಯಂತ್ರ ಎಂದೂ ದೂರಿದರು. ಇದರಲ್ಲಿ ಯಶಸ್ವಿಯೂ ಆದರು.

ಆದರೆ ಸತ್ಯಕ್ಕೆ ಶಕ್ತಿ ಹೆಚ್ಚು ಮತ್ತು ಅದು ಸಶಕ್ತವಾಗಿ ಪೆಡಸಿನಿಂದ ಹೊರ ಹೊಮ್ಮುತ್ತದೆ ಎಂಬುದಕ್ಕೆ ಸಾಕ್ಷಿಯಂತೆ ಬೆಂಗಳೂರಿನ ಬಸವ ಸಮಿತಿಯ ಅರಿವಿನ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಮೀಟಿಂಗ್ ಸಾಕ್ಷಿಯಾಗಿತ್ತು. ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಶಿವಾನಂದ ಜಾಮದಾರ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಅಪಿಲು ಹೋಗುವ ಕುರಿತು ವಿವರವಾಗಿ ಮಾಹಿತಿ ಒದಗಿಸಿದರು.

ಲಿಂಗಾಯತ ಜನ ಸಮುದಾಯದಲ್ಲಿ ಇಂದಿಗೂ ಇರಬಹುದಾದ ಕೆಲವು ಗೊಂದಲಗಳಿಗೆ ಉತ್ತರವಾಗಿ 7-8 ಪುಸ್ತಕಗಳನ್ನು ಸಾವಿರ ಸಾವಿರ ಪ್ರತಿಗಳಲ್ಲಿ ಮುದ್ರಿಸುವುದಾಗಿ ಹೇಳಿದರು. ಸಭೆಯಲ್ಲಿ ಭಾಗವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮಿಗಳು, ಡಾ.ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಜಯ ಮೃತ್ಯುಂಜಯ ಜಗದ್ಗುರುಗಳು, ಚೆನ್ನಬಸವಾನಂದ ಸ್ವಾಮೀಜಿ ಕೂಡಲ ಸಂಗಮ ಮುಂತಾದ ಮಠಾಧೀಶರು ನೂರಾರು ಜನ ಪ್ರಗತಿ ಪರರು, ವಿಚಾರವಾದಿಗಳು, ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ತೊಡೆತಟ್ಟಿ ನಿಂತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here