ವಾಡಿ: ಬೆಂಗಳೂರು ಮಹಾಬೋಧಿ ಸೊಸೈಟಿಯ ಮಹಾಥೇರೊ ಬುದ್ಧರಕ್ಕಿತ ಭಂತೇಜಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ವತಿಯಿಂದ ನೂರಾರು ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಯಿತು.
ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅತ್ಯಂತ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಮಾತನಾಡಿದ ಬೌದ್ಧ ಭಿಕ್ಕು ಸಂಘಾನಂದ, ಕೊರೊನಾ ರೋಗದ ನಿಮಿತ್ತ ಜಾರಿಯಾದ ಲಾಕ್‌ಡೌನ್ ಕಳೆದ ಒಂದು ವರ್ಷದಿಂದ ಕೂಲಿ ಕಾರ್ಮಿಕರ ಬದುಕು ಕಷ್ಟಕ್ಕೆ ನೂಕಿದೆ. ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ಅನ್ನಕ್ಕಾಗಿ ಅಂಗಲಾಚುವ ಕೆಟ್ಟ ಪರಸ್ಥಿತಿ ಸೃಷ್ಠಿಯಾಗಿದೆ. ದಯವೇ ಧರ್ಮದ ಮೂಲ ಎಂಬ ತತ್ವದಡಿ ಉಳ್ಳವರು ಬಡವರಿಗೆ ನೆರವಾಗುವ ಕಾಲವಿದು. ಅಂಬೇಡ್ಕರ್ ತರುಣ ಸಂಘದ ಪದಾಧಿಕಾರಿಗಳು ಹಸಿದವರಿಗೆ ಅನ್ನ ಹಂಚುವ ಕಾರ್ಯ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಬೆನ್ನುತಟ್ಟಿದರು.
ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೌದ್ಧ ಸಮಾಜದ ಖಜಾಂಚಿ ಚಂದ್ರಸೇನ ಮೇನಗಾರ, ಕಾರ್ಯಾಧ್ಯಕ್ಷ ಇಂದ್ರಜೀತ ಸಿಂಗೆ ಅತಿಥಿಗಳಾಗಿದ್ದರು. ಮುಖಂಡರಾದ ಸಂತೋಷ ಜೋಗೂರ, ಸುನೀಲ ವರ್ಮಾ, ಸಂತೋಷ ಕೋಮಟೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.