ಶಹಾಬಾದ: ಪ್ರಸಕ್ತ ವರ್ಷ ಮುಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬಂದಿದ್ದರಿಂದ ರೈತರಲ್ಲಿ ಎಲ್ಲಿಲ್ಲದ ಸಂತಸ ವ್ಯಕ್ತವಾಗಿದಲ್ಲದೇ ಬಿತ್ತನೆಗೆ ಎಲ್ಲಾ ತಯ್ಯಾರಿ ಮಾಡಿಕೊಂಡಿದ್ದಾರೆ.ನಗರದ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಹೆಸರು, ತೊಗರಿ , ಜೋಳ ಬೆಳೆಯಲು ಯೋಗ್ಯವಾದ ಭೂಮಿ ಹೊಂದಿದ್ದು, ಈ ಹೋಬಳಿ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು ಹೆಚ್ಚಾಗಿ ಬೆಳೆಯುತ್ತಾರೆ. ಹವಾಮಾನ ಇಲಾಖೆಯ ವರದಿಯಂತೆ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಮಳೆಯಾದರೆ ಹೆಚ್ಚಿನ ಬಂಪರ್ ಬೆಳೆ ಕಾಣುವ ಸಾಧ್ಯತೆ ಇದೆ. ಕಳೆದ ವರ್ಷ ಅಗತ್ಯಕ್ಕಿಂತ ಹೆಚ್ಚಿನ ಮಳೆಯಾಗಿದ್ದರಿಂದ ನದಿ ತೀರದ ನೆರೆಹಾವಳಿಯಿಂದ ಇಲ್ಲಿನ ರೈತರು ತೀವ್ರ ಸಂಕಷ್ಟ ಎದುರಿಸಿದ್ದರು. ಈ ಸಲ ಮುಂಗಾರು ಹಂಗಾಮಿನಲ್ಲಿ ಮಳೆರಾಯ ಮುನಿಸಿಕೊಳ್ಳದೇ ಇದ್ದರೆ ರೈತರ ಮೊಗದಲ್ಲಿ ಒಂದಿಷ್ಟು ಸಂತೋಷ ಕಾಣಬಹುದು.ಶಹಾಬಾದ ರೈತ ಸಂಪರ್ಕ ವಲಯದಲ್ಲಿ ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಿಕೊಂಡಿದ್ದಾರೆ. ಮುಂಗಾರು ಮಳೆ ಪ್ರಾರಂಭವಾಗಿ ಭೂಮಿ ಹಸಿಯಾಗಿದೆ. ಸದ್ಯ ಬಿತ್ತನೆ ಮಾಡುವುದೊಂದೆ ಕೆಲಸ ಎಂದು ಹೇಳುತ್ತಾರೆ ಇಲ್ಲಿನ ರೈತ ಸದಾನಂದ ಕುಂಬಾರ.
ಬಿತ್ತನೆ ಬೀಜ ಲಭ್ಯ : ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ತೊಗರಿ, ಹೆಸರು,ಉದ್ದು ಬೀಜಗಳನ್ನು ಹಾಗೂ ಪೋಷಕಾಂಶದ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ. ಬಿತ್ತನೆ ಬೀಜ ಸೇರಿದಂತೆ ಹಲವು ಬೆಳೆಗಳ ಬೀಜದ ದಾಸ್ತಾನು ಮತ್ತು ಲಘು ಪೋಷಕಾಂಶ(ಪಿ.ಎಸ್.ಬಿ., ಜಿಂಕ್ ಸಲ್ಫರ್, ಜಿಪ್ಸಂ ಹಾಗೂ ಎರೆಹುಳು ಗೊಬ್ಬರ) ವಿತರಣೆ ಮಾಡಲಾಗುತ್ತಿದೆ. ಶಹಾಬಾದ ಕೃಷಿ ವಲಯದ ಹೊನಗುಂಟಾ, ತೊನಸನಹಳ್ಳಿ(ಎಸ್), ಮರತೂರ, ಭಂಕೂರ, ಮಾಲಗತ್ತಿ, ಇಂಗಳಗಿ ಹಾಗೂ ಕಡಬೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಹಾಗೂ ಅತಿಸಣ್ಣ ರೈತರು ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬೀಜ ಹಾಗೂ ರಸಗೊಬ್ಬರವನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ಸಮಯದಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ರೈತರು ಸಂತೋಷದಲ್ಲಿದ್ದರು. ಅಲ್ಲದೇ ಉತ್ತಮ ಇಳುವರಿಯೂ ಕಂಡಿತ್ತು. ಈ ವರ್ಷವೂ ಸಕಾಲಕ್ಕೆ ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ವರದಿಯಂತೆ ಮಳೆಯಾದರೆ ಕುಡಿಯಲು ನೀರಾಗುತ್ತದೆ. ದನಕರುಗಳಿಗೆ ಮೇವು ಸಿಗುತ್ತದೆ ಎಂದು ಹೇಳುತ್ತಾರೆ ರೈತರು. ಆದರೆ ಈ ಬಾರಿ ಹೊಲವನ್ನು ಹದಮಾಡಿಕೊಂಡು ಬಿತ್ತನೆಗೆ ಸಕಲ ಸಿದ್ದತೆ ಮಾಡಿಕೊಂಡ ರೈತರಿಗೆ ಮುಂಗಾರು ಸಕಾಲಕ್ಕೆ ಪ್ರವೇಶ ಮಾಡಿದ್ದರಿಂದ ಮಳೆರಾಯ ರೈತನ ಸಂಕಷ್ಟಕ್ಕೆ ಕಣ್ತೆರದಂತಾಗಿದೆ. ಬಿತ್ತನೆಗೆ ಬೇಕಾದ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ರೈತಸಂಪರ್ಕ ಕೇಂದ್ರದಿಂದ ರೈತರಿಗೆ ವಿತರಿಸಿದ್ದು, ಬಿತ್ತನೆಯೂ ಮುಗಿದಿದೆ.
ಉತ್ತಮ ಮಳೆಯಾಗಿ ಭೂಮಿ ಹಸಿಯಾಗಿದ್ದು ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಒಟ್ಟಾರೆ ಈ ವರ್ಷವೂ ಕಳೆದ ವರ್ಷದಂತೆ ಉತ್ತಮ ಮಳೆಯಾಗುವ ಆಶಾಭಾವನೆಯೊಂದಿಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಮುಂಗಾರು ಮಳೆ ಉತ್ತಮವಾಗಿದೆ.ಈ ಭಾಗದಲ್ಲಿ ನೆಟೆ ರೋಗ ಕಂಡುಬರುತ್ತಿದ್ದು, ಈ ಬಗ್ಗೆ ರೈತರಿಗೆ ಆದಷ್ಟು ವಿಜ್ಞಾನಿಗಳಿಂದ ತರಬೇತಿ ನೀಡುವ ಅಗತ್ಯವಿದೆ.ಅಲ್ಲದೇ ರೈತ ಸಂಪರ್ಕ ಕೇಂದ್ರದಿಂದ ಆಗಾಗ ಮಾಹಿತಿ ಒದಗಿಸುವ ಕೆಲವಾಗಬೇಕಿದೆ.- ರಾಜೇಶ ಯನಗುಂಟಿಕರ್ ರೈತ ಗೋಳಾ(ಕೆ).