ಆಳಂದ: ನೇಕಾರರು ನೂರಾರು ವರ್ಷಗಳಿಂದ ಬಟ್ಟೆ ನೇಯ್ಗೆ ವೃತ್ತಿಯನ್ನೇ ಅವಲಂಬಿಸಿ, ಅನೇಕ ಸಮಸ್ಯೆಗಳಿದ್ದರೂ ಇಂದಿಗೂ ಕೂಡಾ ವೃತ್ತಿಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಹಿರಿಯ ಕೈಮಗ್ಗ ನೇಕಾರ ಗೋವಿಂದಪ್ಪ ಹುಲಿಮನಿ ಅವರು ಹೇಳಿದರು.
ತಾಲ್ಲೂಕಿನ ಸುಟಂನೂರ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಏಳನೇ ರಾಷ್ಟ್ರೀಯ ಕೈಮಗ್ಗ ನೇಕಾರರ ದಿನಾಚರಣೆಯಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸಮಾಜಕ್ಕೆ ಬಟ್ಟೆಯನ್ನು ನೀಡಿ ಮಾನವನ್ನು ಕಾಪಾಡುವ ನೇಕಾರರ ಬದುಕು ಸಂಕಷ್ಟದಲ್ಲಿದೆ. ವೃತ್ತಿಗೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳು, ಆರ್ಥಿಕ ಸಹಾಯದಂತಹ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಅವರ ಬದುಕು ಹಸನುಗೊಳಿಸುವ ಕಾರ್ಯವಾಗಬೇಕಾದ್ದು ಪ್ರಸ್ತುತ ಅಗತ್ಯವಾಗಿದೆಯೆಂದು ಎಂದ ಅವರು ನೇಕಾರರಿಗೆ ಶ್ರಮಕ್ಕೆ ತಕ್ಕಂತೆ ಕೂಲಿ ದೊರೆಯುತ್ತಿಲ್ಲ.
ಉತ್ತಮ ಗುಣಮಟ್ಟದ ಸಲಕರಣಗಳ ಪೂರೈಕೆಯಾಗಬೇಕು. ಸರ್ಕಾರದ ಯೋಜನೆಗಳು ಸೂಕ್ತ ವ್ಯಕ್ತಿಗೆ ತಲುಪಬೇಕು. ವಸತಿ, ವಿಮಾ ಸೌಲಭ್ಯ, ನೇಕಾರ ಮರಣ ಹೊಂದಿದ ನಂತರ ಆತನ ಅವಲಂಬಿತರಿಗೆ ಪಿಂಚಣಿ ನೀಡಬೇಕು. ಸರಳವಾಗಿ ಸಾಲ ಸೌಲಭ್ಯ ದೊರೆಯಬೇಕಾಗಿದೆ. ನೇಕಾರರ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಮಾರುಕಟ್ಟೆ ವ್ಯವಸ್ಥೆ ಸುಧಾರಿಸಬೇಕಾಗಿದೆ. ನೇಕಾರಿಕೆಯ ವೃತ್ತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾದರೆ ಜೀವನ ಕಷ್ಟವಾಗಿದ್ದರಿಂದ ನೇಕಾರಿಕೆ ವೃತ್ತಿಯಿಂದು ಅಳಿವಿನಂಚಿನಲ್ಲಿದೆಯೆಂದು ಎಂದು ತಿಳಿಸಿದರು.
ಬಳಗದ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಆಧುನಿಕತೆ ಹಾಗೂ ಕೈಗಾರಿಕಾ ಕ್ರಾಂತಿಯಿಂದಾಗಿ ನಮ್ಮ ದೇಶದ ಮೂಲ ವೃತ್ತಿ ಕಸುಬುಗಳು, ಗೃಹ ಕೈಗಾರಿಕೆಗಳಿಂದು ಅವನತಿಯ ಅಂಚಿನಲ್ಲಿವೆ. ಇದರಿಂದ ವೃತ್ತಿ ಅವಲಿಂಬಿತ ಅನೇಕ ಜನರು ಸಂಕಷ್ಟದಲ್ಲಿದ್ದಾರೆ. ಗುಡಿ, ಗೃಹ ಕೈಗಾರಿಕೆಗಳು ಉಳಿದರೆ ಮಾತ್ರ ಮೂಲ ವೃತ್ತಿ ಉಳಿದು, ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ವೃದ್ಧಿಯಾಗಲಿದೆ. ನೇಕಾರರು ಸರ್ಕಾರದ ಯೋಜನಗೆಳನ್ನು ಸದುಪಯೋಗಮಾಡಿಕೊಳ್ಳಬೇಕು. ನೇಕಾರಿಕೆ ವೃತ್ತಿಯ ಬೆಳೆವಣಿಗೆಗೆ ಪೂರಕವಾದ ನೀತಿಗಳನ್ನು ರಚಿಸಿ, ಅವುಗಳನ್ನು ವೃತ್ತಿ ನೇಕಾರರಿಗೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆಯೆಂದು ಹೇಳಿದರು.
ಕೈಮಗ್ಗ ವೃತ್ತಿ ನೇಕಾರರಾದ ರವೀಂದ್ರ ಜೋಳದ, ಮಹಾದೇವಪ್ಪ ಹುಲಿಮನಿ, ಮಲ್ಲಣ್ಣ ಮಾಳಾ, ಈರಮ್ಮ ಘಸ್ನಿ, ಗುರಣ್ಣ ಘಸ್ನಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಪ್ರಮುಖರಾದ ರಾಜಶೇಖರ ಗುಂಡದ್, ಶರಣಬಸಪ್ಪ ಮಾಲಿ ಬಿರಾದಾರ ದೇಗಾಂವ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಎಸ್.ಪುರಾಣೆ, ಸಿದ್ದರಾಮ ತಳವಾರ, ಸೋಮೇಶ ಡಿಗ್ಗಿ, ಮಾಣಿಕಪ್ಪ ಗುಂಡದ್, ದತ್ತಾತ್ರೇಯ ಹುಲಿಮನಿ, ಸಿದ್ದರಾಜ ಜೋಳದ್, ಮಲ್ಲಿಕಾರ್ಜುನ ಜೋಳದ್, ಪುಂಡಲಿಕ ಜೋಳದ್, ಜನಾರ್ಧನ ಹುಲಿಮನಿ, ವಿಠಲ ತಳವಾರ ಸೇರಿದಂತೆ ಮತ್ತಿತರರಿದ್ದರು.