ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವು ಪರ‍್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಪಕ್ಷದ ಮುಖಂಡರೂ ಆದ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕರೂ ಮತ್ತು ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಚ್.ಡಿ. ಬಸವರಾಜು ಅವರು ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿನ ಜನತೆ ಕಾಂಗ್ರೆಸ್, ಜನತಾದಳ ಹಾಗೂ ಬಿಜೆಪಿ ಸರ್ಕಾರದ ಆಡಳಿತವನ್ನು ನೋಡಿದ್ದಾರೆ. ಮೂರು ಪಕ್ಷಗಳ ಆಡಳಿತದ ಸಂದರ್ಭದಲ್ಲಿನ ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೂರು ಪಕ್ಷಗಳಿಗಿಂತ ವಿಭಿನ್ನವಾಗಿರುವ ಆಮ್ ಆದ್ಮಿಯತ್ತ ರಾಜ್ಯದ ಜನರು ಒಲುವು ತೋರಿಸುವ ಮೂಲಕ ಪರ‍್ಯಾಯ ಶಕ್ತಿಯನ್ನಾಗಿ ಮಾಡಬೇಕು. ಆ ದಿಸೆಯಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಕರ್ನಾಟಕದಲ್ಲಿ ಮೂರು ಪಕ್ಷಗಳು ಉತ್ತಮ ಆಡಳಿತ ಕೊಡುವ ಬದಲು ಪರಸ್ಪರ ಅಧಿಕಾರಕ್ಕೆ ಕಚ್ಚಾಡುತ್ತಿವೆ. ಅಧಿಕಾರಕ್ಕೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳು ಆಡಳಿತ ಪೂರ್ಣಗೊಳಿಸಲಿಲ್ಲ. ಮೈತ್ರಿ ಸರ್ಕಾರ ಬಿದ್ದು ಹೋಯಿತು. ಬಿಜೆಪಿ ಅಧಿಕಾರಕ್ಕೆ ಬಂದರೂ ಸಹ ಬಿ.ಎಸ್. ಯಡಿಯೂರಪ್ಪ ಅವರನ್ನು ಪೂರ್ಣ ಅವಧಿಯವರೆಗೆ ಆಡಳಿತ ನಡೆಸಲು ಬಿಡಲಿಲ್ಲ. ಈಗ ನೂತನ ಮುಖ್ಯಮಂತ್ರಿಗಳಾಗಿ ಬಸವರಾಜ್ ಬೊಮ್ಮಾಯಿ ಅವರು ಕಾರ್ಯನಿರ್ವಹಿಸುತ್ತಿದ್ದರೂ ಸಹ ಸಚಿವ ಸಂಪುಟ ರಚನೆ ಹಾಗೂ ಖಾತೆಗಳ ಹಂಚಿಕೆಯ ವಿಷಯದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಇವೆ. ಹೀಗಾಗಿ ಮೂರು ಪಕ್ಷಗಳಿಂದ ರಾಜ್ಯದಲ್ಲಿ ಉತ್ತಮ ಆಡಳಿತ ಕೊಡಲು ಆಗುವುದಿಲ್ಲ ಎಂದು ರಾಜ್ಯದ ಜನತೆ ಮನಗಂಡಿದ್ದಾರೆ ಎಂದು ಅವರು ಹೇಳಿದರು.
ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಮೂರನೇ ಅವಧಿಯವರೆಗೆ ಆಡಳಿತದಲ್ಲಿದೆ. ಅಲ್ಲಿನ ಬಡ ಜನತೆಗೆ ಉಚಿತ ವಿದ್ಯುತ್, ಉಚಿತ ರೇಷನ್ ಹಾಗೂ ಉಚಿತ ಆರೋಗ್ಯ ನೀಡುವ ಕ್ರಮಗಳನ್ನು ಕೈಗೊಂಡಿದೆ. ಶಿಕ್ಷಣ ವ್ಯವಸ್ಥೆಯ ಕುರಿತು ಅಮೇರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಪತ್ನಿಯೇ ಇಡೀ ಜಗತ್ತಿಗೆ ಮಾದರಿ ಎಂದು ಬಣ್ಣಿಸಿದ್ದಾರೆ. ಮಹಿಳೆಯರು ದೆಹಲಿಯಲ್ಲಿ ಉಚಿತವಾಗಿ ಪ್ರಯಾಣಿಸುವ ವ್ಯವಸ್ಥೆಯನ್ನು ಸರ್ಕಾರ ಕೈಗೊಂಡಿದೆ. ಇಂತಹ ಜನಪರ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಜಾರಿಯಾಗಲು ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಪಾರದರ್ಶಕದ ಆಡಳಿತದ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಅವಕಾಶವಿದೆ ಎಂದು ಹೇಳಿದ ಅವರು, ಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಮುಂದಾಗಬೇಕು ಎಂದರು.
ಪಕ್ಷದ ರಾಜ್ಯ ಸಂಚಾಲಕ ಜಗದೀಶ್ ಸದಂ ಅವರು ಮಾತನಾಡಿ, ಬರಲಿರುವ ಸ್ಥಳೀಯ ಸಂಸ್ಥೆಗಳು ಪಕ್ಷಕ್ಕೆ ಬಹುಮುಖ್ಯವಾಗಿದೆ. ಕಾರ್ಯಕರ್ತರು ಸಮರ್ಥವಾಗಿ ಎದುರಿಸಬೇಕು ಎಂದರು.
ಸಭೆಯಲ್ಲಿ ಪಕ್ಷದ ಜಿಲ್ಲಾ ಸಂಚಾಲಕ ಜಗದೀಶ್ ಬಳ್ಳಾರಿ, ಮಾಧ್ಯಮ ಸಂಚಾಲಕ ಸಂಜೀವಕುಮಾರ್ ಕರಿಕಲ್, ಶ್ರೀಮತಿ ಅಂಜನಾ ಯಾತನೂರ್, ಬಾಬರ್ ಮುಸ್ತಫಾ, ಶೇಖರಸಿಂಗ್, ಕಿರಣ್ ರಾಠೋಡ್, ಮೀರ್ ಮೊಹಸಿನ್, ವಿಜಯಕುಮಾರ್ ಚಿಂಚನಸೂರ್, ಮಲ್ಲಿನಾಥ್ ನಲ್ಲನಕರ್, ಮಂಸೂರ್ ಅಲಿ, ಆಕಾಶ್, ಪಾಶಾ ಮಿಯಾ ಹೀರಾಪುರ, ಗೀತಾ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.