ಕೇಸರಿಬೆಟ್ಟದಲ್ಲಿ ದ್ವಿತೀಯ ಸಾಂಬ ಶಿವಯೋಗಿ ಶಿವಾಚಾರ್ಯರಿಂದ ಚಾತುರ್ಮಾಸ ತಪೋನುಷ್ಠಾನ

0
25

ಕಲಬುರ್ಗಿ: ಸಲಗರ್ ಹಾಗೂ ಕೇಸರಿಬೆಟ್ಟದ ಹಿರೇಮಠ್ ಸಂಸ್ಥಾನದ ತಪೋರತ್ನ, ಬಾಲತಪಸ್ವಿ ದ್ವಿತೀಯ ಸಾಂಬ ಶಿವಯೋಗಿ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿ, ಮಾನವ ಕುಲದ ಉದ್ಧಾರಕ್ಕಾಗಿ ಶ್ರಾವಣ ಮಾಸದಿಂದ ನಾಲ್ಕು ತಿಂಗಳು ನಿರಂತರ ತ್ರಿಕಾಲ ಇಷ್ಟಲಿಂಗ ಪೂಜೆ ತಪೋನುಷ್ಠಾನಗೈಯ್ಯುವರು ಎಂದು ತಪೋನುಷ್ಠಾನ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಸುಭಾಷ್ ಬಿರಾದಾರ್ ಕಮಲಾಪೂರ್ ಅವರು ತಿಳಿಸಿದ್ದಾರೆ.

ಆಗಸ್ಟ್ ೯ರಿಂದ ಡಿಸೆಂಬರ್ ೫ರವರೆಗೆ ಜರುಗುವ ತಪೋನುಷ್ಠಾನದ ನಿಮಿತ್ಯ ಶ್ರೀಗಳು ಶ್ರೀ ತಪೋನಿಧಿ ಸಾಂಬ ಶಿವಯೋಗಿಶ್ವರರ ಕತೃಗದ್ದುಗೆಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಆವರ್ತನ ಶ್ರೀ ರುದ್ರಾಭಿಷೇಕ, ತದನಂತರ ಪ್ರತಿನಿತ್ಯ ಸಂಜೆ ೬ ಗಂಟೆಗೆ ೧೦೮ ದೀಪೋತ್ಸವ ಹಾಗೂ ಗುರುಪೂಜೆ, ಅನ್ನದಾಸೋಹ, ಭಜನೆ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

Contact Your\'s Advertisement; 9902492681

ಕಾರ್ಯಕ್ರಮವು ಜನಕಲ್ಯಾಣಕ್ಕಾದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಅವಕಾಶ ಇರುವುದಿಲ್ಲ. ಶ್ರೀಗಳು ಬೆಳಿಗ್ಗೆ ೧೧ರಿಂದ ೧೨ ಗಂಟೆ ಹಾಗೂ ಸಂಜೆ ೫ರಿಂದ ೬ ಗಂಟೆಯವರೆಗೆ ಮಾತ್ರ ದರ್ಶನ ಕೊಡಲಿದ್ದು, ಉಳಿದ ಎಲ್ಲ ಸಮಯ ತ್ರಿಕಾಲ ಪೂಜೆಯಲ್ಲಿರುತ್ತಾರೆ. ನಾಡಿಗೆ ಬಂದ ಕೊರೋನಾ ಸಂಕಟ ದೂರವಾಗಲೆಂದು ಪ್ರತಿನಿತ್ಯ ೧೦೮ ದೀಪೋತ್ಸವ, ಪೂಜೆ, ಜಪಯಜ್ಞ ಮುಂತಾದ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವರು, ಪೂಜೆ ಸೇವೆ ಸಲ್ಲಿಸಲು ಪ್ರತಿನಿತ್ಯ ೫೦ ಜನ ಭಕ್ತರಿಗೆ ಮಾತ್ರ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಪೂಜ್ಯ ಬಾಲತಪಸ್ವಿ ದ್ವಿತೀಯ ಸಾಂಬಶಿವ ಶಿವಯೋಗಿ ಶಿವಾಚಾರ್ಯರು ಇದುವರೆಗೆ ಕಳೆದ ೨೬ ವರ್ಷಗಳಿಂದ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ತ್ರಿಕಾಲ ಲಿಂಗಪೂಜೆ ಹಾಗೂ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದ್ದಾರೆ. ಶ್ರೀಗಳ ಪೂಜೆಯ ವೈಭವ ನೊಡಲು ಪ್ರತಿ ವರ್ಷ ಶ್ರಾವಣ ಸೋಮವಾರಕ್ಕೊಮ್ಮೆ ಭಕ್ತರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಶ್ರೀಗಳ ಮಹಾಪೂಜೆ ೮ ಗಂಟೆ ನಿರಂತರ ಸಾಮೂಹಿಕವಾಗಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರ ಮುಂತಾದ ಭಾಗಗಳಿಂದ ಭಕ್ತರು ಭಾಗವಹಿಸುತ್ತ ಬಂದಿದ್ದಾರೆ. ಪೂಜೆ ವೈಭವ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಭಕ್ತರು ಪುನೀತರಾಗುತ್ತಾರೆ ಎಂದು ಅವರು ಹೇಳಿದ್ದಾರೆ.
ಸಹಸ್ರಾರು ಬಿಲ್ವಪತ್ರಿಗಳು, ನಾನಾ ವಿಧದ ರಾಶಿ, ರಾಶಿ ಹೂಗಳ ಅಲಂಕಾರ, ಪಂಚಾಮೃತ, ಅಭಿಷೇಕ, ವೇದಘೋಷ, ಸಂಗೀತ, ಭಜನೆ, ನೃತ್ಯಗಳ ಮೇಳ ಮುಂತಾದ ಕಾರ್ಯಕ್ರಮಗಳು ಭಕ್ತರಿಗೆ ಸಾಕ್ಷಾತ್ ಕೈಲಾಸವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
ಶ್ರೀಗಳ ಪೂಜೆ ಮುಗಿಯುತ್ತಲೇ ನೂರಾರು ಭಕ್ತರು ತುಲಾಭಾರ ಸೇವೆಯನ್ನು ಮಾಡುವರು. ಪ್ರತಿ ಸೋಮವಾರ ಲಿಂಗರಾಜ್ ಹೇನೆಯವರ ಮಾರ್ಗದರ್ಶನದಲ್ಲಿ ಬಗೆ, ಬಗೆಯ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಡೊಳ್ಳು, ನಗಾರೆ, ಗಂಟೆ, ಜಾಗಟೆ, ಶಂಖ, ಢಮರುಗದ ಕಹಳೆ, ಸಂಗೀತದಂತಹ ಅನೇಕ ವಾದ್ಯಗಳ ಮೇಳ ಮುಂತಾದವುಗಳಿಂದ ಭಕ್ತರನ್ನು ಮಂತ್ರಮುಗ್ದರನ್ನಾಗಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ರಾಜವೈಭವದ ಪೂಜೆಯನ್ನು ಕಳೆದ ವರ್ಷ ಹಾಗೂ ಈ ವರ್ಷ ಮಹಾಮಾರಿ ಕೊರೋನಾ ಆತಂಕದಿಂದ ರದ್ದುಗೊಳಿಸಲಾಗಿದೆ. ಕೇವಲ ತ್ರಿಕಾಲ ಪೂಜೆ, ಜಪ, ತಪ, ದಾಸೋಹ ಕಾರ್ಯಕ್ರಮಕ್ಕೆ ಅತೀ ಕಡಿಮೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಸದ್ಭಕ್ತರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here