ಸುರಪುರ: ಯಾವುದೇ ನಗರ ಪಟ್ಟಣವಿರಲಿ ಅದನ್ನು ಸ್ವಚ್ಛವಾಗಿಡುವ ಮೂಲಕ ಎಲ್ಲರ ಆರೋಗ್ಯವನ್ನು ಕಾಪಾಡುವ ಮತ್ತು ತಾವು ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೆ ಜಗತ್ತಿನ ಎಲ್ಲಾ ನಗರಗಳನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ರಾಜುಗೌಡ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಶಾಖೆ ಸುರಪುರ ಮತ್ತು ಕಕ್ಕೇರಾ ಹಾಗು ನಗರಸಭೆ ಕಾರ್ಯಾಲಯ ಸುರಪುರ ಮತ್ತು ಪುರಸಭೆ ಕಾರ್ಯಾಲಯ ಕಕ್ಕೇರಾ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-೨೦೨೧ನ್ನು ಉದ್ಘಾಟಿಸಿ ಮಾತನಾಡಿ,ಇಂದು ದೇಶದಲ್ಲಿ ಎಲ್ಲರಿಗಿಂತಲೂ ಮೊದಲು ಎದ್ದು ನಗರದೊಳಗಿನ ಎಲ್ಲಾ ಕಸವನ್ನು ಎತ್ತಿ ಹಾಕಿ ಸ್ವಚ್ಛಗೊಳಿಸುವ ಮೂಲಕ ತಮ್ಮ ದಿನವನ್ನು ಆರಂಭಿಸುವ ಪೌರ ಕಾರ್ಮಿಕರ ಸೇವೆಯನ್ನು ಮನಗಂಡ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರು ಪಾದ ಪೂಜೆ ಮಾಡಿರುವುದು ಪೌರಕಾರ್ಮಿಕರದ್ದು ಇಂತಹ ಪೌರ ಕಾರ್ಮಿಕರನ್ನು ಎಲ್ಲರು ನಿತ್ಯವು ನೆನೆಯಬೇಕೆಂದರು.
ಇದೇ ಸಂದರ್ಭದಲ್ಲಿ ತಮ್ಮ ಕೆಲ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ ಪೌರಕಾರ್ಮಿಕರ ಬೇಡಿಕೆಗಳ ಕುರಿತು ಮಾತನಾಡಿ,ಇದೀಗ ತಾವು ಮನವಿ ಸಲ್ಲಿಸಿದಂತೆ ೧೦ ರಿಂದ ೧೨ ವರ್ಷಗಳಿಂದ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಬಗ್ಗೆ ಕೇಳಿದ್ದಿರಿ ಇದಕ್ಕೆ ನಾನುಕೂಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು ಹಾಗು ದಿನಾ ಬೆಳಿಗ್ಗೆ ಕರ್ತವ್ಯ ನಿರ್ವಹಿಸಿದ ಪೌ ಕಾರ್ಮಿಕರು ನಂತರ ಸ್ನಾನ ಮಾಡಿ ಮನೆಗೆ ಹೋಗಲು ಕಕ್ಕೇರಾದಲ್ಲಿ ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸ್ನಾನ ಗೃಹ ನಿರ್ಮಾಣ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ,ಇಲ್ಲಿಯೂ ಇಂತಹ ಕಾರ್ಯ ಆಗಬೇಕೆಂದರು.ಅಲ್ಲದೆ ಸುರಪುರ ನಗರಕ್ಕೆ ಶಾಸ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಇನ್ನೂ ಕೆಲ ದಿನಗಳಲ್ಲಿ ಮುಖ್ಯಮಂತ್ರಿಗಳು ಮತ್ತು ಪೌರಾಡಳಿತ ಸಚಿವರಿಂದ ಅಡಿಗಲ್ಲು ಸಮಾರಂಭ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಸರಕಾರ ನೀಡಿರುವ ಪ್ರತಿ ಪೌರಕಾರ್ಮಿಕನಿಗೆ ೭ ಸಾವಿರ ರೂಪಾಯಿಗಳ ಚೆಕ್‌ನ್ನು ವಿತರಣೆ ಮಾಡಿದರು.ನಂತರ ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ಗೆದ್ದ ತಂಡಗಳಿಗೆ ಮತ್ತು ಕ್ರೀಡಾಪಟುವಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಪೌರ ಕಾರ್ಮಿಕರ ಮೆರವಣಿಗೆ ನಡೆಸಲಾಯಿತು.ಕಾರ್ಯಕ್ರಮದ ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸುಜಾತಾ ವಿ ಜೇವರ್ಗಿ,ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ (ತಾತಾ) ಹಾಗು ನಗರಸಭೆ ಸದಸ್ಯರಾದ ನರಸಿಂಹಕಾಂತ ಪಂಚಮಗಿರಿ,ಶಿವಕುಮಾರ ಕಟ್ಟಿಮನಿ,ನಾಸಿರ ಕುಂಡಾಲೆ,ಜುಮ್ಮಣ್ಣ ಕೆಂಗುರಿ,ಮೌಲಿಸಾಬ್ ಸೇರಿದಂತೆ ಅನೇಕರಿದ್ದರು.ನಗರಸಭೆ ಕಮಿಷನರ್ ಜೀವನ್‌ಕುಮಾರ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಪೌರಕಾರ್ಮಿಕರ ಸಂಘದ ಅಧ್ಯಕ್ಷೆ ಶಿವಲೀಲಾ ಅವರು ಅಧ್ಯಕ್ಷತೆವಹಿಸಿದ್ದರು.ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಅನೇಕ ಜನ ಪೌರಕಾರ್ಮಿಕರು ಭಾಗವಹಿಸಿದ್ದರು.