ಆಳಂದ: ದೇಶದಲ್ಲಿ ಕೋವಿಡ್ ಲಸಿಕೆ ಹಾಕಿಸುವಲ್ಲಿ ೧೦೦ ಕೋಟಿ ತಲುಪಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಆಕಾಶದಲ್ಲಿ ಬಲೂನ ಹಾರಿಸುವ ಮೂಲಕ ಸಿಬ್ಬಂದಿಗಳು ಸಂಭ್ರಮಿಸಿದರು.
ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾಲೂಕು ಆರೋಗ್ಯಾಧಿಕಾರಿ ಶುಶಿಲಕುಮಾರ ಅಂಬುರೆ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಚಂದ್ರಕಾಂತ ನರಬೋಳೆ ಹಾಗೂ ಇನ್ನೂಳಿದ ವೈದ್ಯರು ಮತ್ತು ಸಿಬ್ಬಂದಿಗಳು ಬಲೂನ ಹಾರಿಸಿದರು.
ಇದೇ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ| ಶುಶೀಲಕುಮಾರ ಅಂಬರೆ ಅವರು ತಾಲೂಕಿನಲ್ಲಿ ಶೇ ೬೪ರಷ್ಟು ಲಸಿಕೆ ನೀಡಲಾಗಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಲಸಿಕೆ ನೀಡುವಲ್ಲಿ ಆರೋಗ್ಯ ಸಿಬ್ಬಂದಿಗಳ ಕಾರ್ಯ ಪ್ರವರ್ತರಾಗಿದ್ದಾರೆ ಎಂದರು. ಕೊರೊನಾ ತೊಲಗಿಸಲು ಲಸಿಕೆ ಪಡೆಯುವುದೊಂದೇ ಮದ್ದಾಗಿದ್ದು, ಜನರು ಸಹ ಸ್ವಯಂ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಚಂದ್ರಕಾಂತ ನರಬೋಳ ಅವರು ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ಅತ್ಯಂತ ಯಶಸ್ವಿಯಾಗಿ ಸಿಬ್ಬಂದಿಗಳು ರೋಗಿಗಳನ್ನು ಗುಣಪಡಿಸುವಲ್ಲಿ ಶ್ರಮಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆ ಪಡೆದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ, ಸಾರ್ವಜನಿಕರು ಲಸಿಕೆಯ ಲಾಭವನ್ನು ಪಡೆದುಕೊಳ್ಳಬೆಕು.
ದೇಶದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ಸಾಧನೆಯಿಂದಲೇ ಇಂದು ೧೦೦ ಕೋಟಿ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಬಣ್ಣಿಸಿದರು. ಡಾ| ಪ್ರೀಯಾಂಕಾ, ಡಾ| ಪೂಜಾ, ಡಾ| ಅಶ್ವೀನಿ, ಸಹಾಯಕ ಆಡಳಿತಾಧಿಕಾರಿ ಈರಣ್ಣಾ ಮೂಲಿಮನಿ, ಡಾ| ನಾಜೀಯಾ ಬೇಗಂ, ಎಫ್‌ಡಿಸಿ ಸುದೀಪ್ ನಿರಳ್ಳಿ, ಡಾ| ಸುನೀಲ್, ಶ್ರೀಕಾಂತ ಕೆಂಗೇರಿ ಸೇರಿ ಆಸ್ಪತ್ರೆಯ ಇತರ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಸ್ಪತ್ರೆಯ ಕಟ್ಟಡಕ್ಕೆ ರಂಗು ರಂಗಿನ ವಿದ್ಯುತ್ ದೀಪಾಲಂಕರಿಸಿದ ಹಿನ್ನೆಲೆಯಲ್ಲಿ ಕಂಗೋಳಿಸಲಾಗಿತ್ತು.