ಕಲಬುರಗಿ: ಶಹಾಬಾದ ತಾಲೂಕಿನ ಭಂಕೂರ ಗ್ರಾಮದ ತವರು ಮನೆಯಲ್ಲಿದ್ದ ಸರಕಾರಿ ಶಾಲೆಯ ಶಿಕ್ಷಕಿಯೊಬ್ಬಳು ವ್ಯಾಟ್ಸಾಪ್‍ನಲ್ಲಿ ಸಿದ್ದಣ್ಣ ಸಂಗಾವಿ(ಗಂಡ) ನೀನು ನನಗೆ, ನನ್ನ ಮಗುವಿಗೆ ಮೋಸ ಮಾಡಿದ್ದೀಯಾ ಎಂದು ಸ್ಟೇಟಸ್ ಇಟ್ಟು ಹೆಣ್ಣು ಮಗುವಿನೊಂದಿಗೆ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರದಂದು ಬೆಳಗಿನ ಜಾವ ನಡೆದಿದೆ.
ಶಾಂತಾಕುಮಾರಿ ಸಿದ್ದಣ್ಣ ಸಂಗಾವಿ (32) ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಡೆಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶಾಂತಾಕುಮಾರಿ ರವಿವಾರ ಬೆಳಿಗ್ಗೆ 5 ಗಂಟೆಗೆ ಮಗುವಿನೊಂದಿಗೆ ದ್ವಿಚಕ್ರವಾಹನದಲ್ಲಿ ಬಂದು ಶಂಕರವಾಡಿ ಬಳಿಯ ಕಾಗಿಣಾ ನದಿಯ ಸೇತುವೆ ಮೇಲೆ ವಾಹನ ನಿಲ್ಲಿಸಿ, ತನ್ನ 9 ತಿಂಗಳ ಮಗು ಗಂಗಾಳೊಂದಿಗೆ ನದಿಗೆ ಹಾರಿದ್ದಾಳೆ.
ಆತ್ಮ ಹತ್ಯೆ ಮಾಡಿಕೊಳ್ಳುವ ಮುಂಚೆ ವ್ಯಾಟ್ಸಾಪ್ ಸ್ಟೇಟ್‍ಸ್‍ನಲ್ಲಿ ಕೈಮುಗಿದ ಪೋಟೋ ಹಾಕಿ ಥ್ಯಾಂಕ್ಯೂ ಎಂದು ಬರೆದು ತನ್ನ ಗಂಡ ಸಿದ್ದು ಸಂಗಾವಿ ನೀನು ನನಗೆ ಮೋಸ ಮಾಡಿದ್ದಿ ನನ್ನ ಹಾಗೂ ಮಗುವಿನ ಜೀವನ ಹಾಳು ಮಾಡಿದ್ದಿಯಾ ಎಂದು ಬರೆದು, ಅತ್ತೆ ಶಿವಲಿಂಗಮ್ಮಾ, ನಾದಿನಿಯರಾದ ಲಕ್ಷ್ಮಿ, ಲಚ್ಚು, ಅನ್ಸು ಅಕ್ಕಾ, ಜಗು ಅಕ್ಕಾ, ಗೌರಿ ಅಕ್ಕಾ ಐ ಹೇಟ್ ಯೂ ಎಂದು ಬರೆದಿದ್ದಾಳೆ.
ಮೂರು ವರ್ಷದ ಹಿಂದೆ ಭಂಕೂರನ ಶಾಂತಾ ಅವರನ್ನು ಚಿತ್ತಾಪರು ಎಪಿಎಂಸಿ ಮಾಜಿ ಅಧ್ಯಕ್ಷ ದಿ. ಶರಣಪ್ಪ ಸಂಗಾವಿ, ಜಿಪಂ.ಸದಸ್ಯೆ ಶಿವಲಿಂಗಮ್ಮಾ ಸಂಗಾವಿ ಅವರ ಪುತ್ರ ಸಿದ್ದು ಸಂಗಾವಿ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಶವ ಗೋಳಾ (ಕೆ) ಬಳಿಯ ರೈಲ್ವೆ ಸೇತುವೆ ಬಳಿ ಸಿಕ್ಕಿದೆ. ಆದರೆ ಮಗುವಿನ ಶವ ಮಾತ್ರ ಸಿಕ್ಕಿಲ್ಲ.ಅದಕ್ಕಾಗಿ ಎನ್‍ಡಿಆರ್‍ಎಫ್ ತಂಡ ಆಗಮಿಸಿ, ಸಂಜೆಯವರೆಗೆ ಹುಡುಕಾಡಿದ್ದು, ಶವ ಪತ್ತೆಯಾಗಿಲ್ಲ. ಈ ಕುರಿತು ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.