ಸುರಪುರ: ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ನಗರದ ತಹಸೀಲ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ಸರಕಾರದ ಆದೇಶದಂತೆ ಈಬಾರಿ ಯಾವುದೇ ಸಮಾರಂಭ ಮೆರವಣಿಗೆ ಇಲ್ಲದೆ ರಾಜ್ಯೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಆದರೆ ಈಬಾರಿ ಸರಕಾರ ವಿಶೇಷವಾಗಿ ಆಚರಿಸುವುದಕ್ಕಾಗಿ ನಾಡಿನೆಲ್ಲೆಡೆ ಕನ್ನಡ ಓದು,ಹಾಡು ಮತ್ತಿತರೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡತನವನ್ನು ಮೆರೆಯುವ ವಿಶೇಷತೆಯನ್ನು ಆಚರಿಸಲು ಮುಂದಾಗಿದೆ.ಅದರಂತೆ ಇದೇ ತಿಂಗಳ ೨೮ ರಂದು ದರಬಾರ ಶಾಲೆಯ ಆವರಣದಲ್ಲಿ ವಿಶೇಷವಾದ ಕನ್ನಡದ ಮೆರಗನ್ನುಳ್ಳ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮ ಆಚರಿಸೋಣ ಮತ್ತು ನವೆಂಬರ್ ೧ರಂದು ಕನ್ನಡ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಆಚರಿಸೋಣ ಎಂದರು.
ಅಂದು ಎಲ್ಲ ಶಾಲಾ-ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಕನ್ನಡ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲು ಒಂದು ವಾರದ ಕಾಲ ನಾಟಕ, ಸಂಗೀತ ಕಾರ್ಯಕ್ರಮ, ಕನ್ನಡದಲ್ಲಿ ಮಾತು ಮತ್ತು ಬರವಣಿಗೆ, ದೇಶೀಯ ಉಡುಪು ತಿನಿಸುಗಳ ಕುರಿತು, ಗಡಿಭಾಗದಲ್ಲಿ ಕನ್ನಡ ಜಾಗೃತಿ, ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಸಾಮೂಹಿಕ ಕನ್ನಡ ಗೀತಾಗಾಯನ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ, ತಾಲೂಕಾಡಳಿತದಿಂದ ನಡೆಯುವ ಯಾವುದೇ ಸರಕಾರಿ ಸಭೆ, ಪೂರ್ವಭಾವಿ ಸಭೆಗು ನಮಗೆ ಮಾಹಿತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ತಹಸೀಲ್ದಾರರು ಮುಂದೆ ಹೀಗಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಇಒ ಅಂಬ್ರೇಶ್ ಮೂಡಲದಿನ್ನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ರೆಡ್ಡಿ, ವಲಯ ಅರಣ್ಯ ಅಧಿಕಾರಿ ಮೌಲಾಲಿ ಸಾಬ್, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರಾ, ಪಶು ಸಂಗೋಪನಾ ವೈದ್ಯಾಧಿಕಾರಿ ಸುರೇಶ ಹಚ್ಚಡ, ಅಲ್ಪಸಂಖ್ಯಾತ ವಸತಿ ನಿಲಯ ಸಂಗೀತಾ,ಸಮಾಜ ಕಲ್ಯಾಣ ಎಡಿ ಸತ್ಯನಾರಾಯಣ ದರಬಾರಿ, ಮುಖಂಡರಾದ ಭೀಮುನಾಯಕ ಮಲ್ಲಿಬಾವಿ, ಪ್ರಭು ಮಂಗಿಹಾಳ, ಸಿಬ್ಬಂದಿಗಳಾದ ಕೊಂಡಲನಾಯಕ,ಪ್ರದೀಪ ನಾಲ್ವಡೆ, ರವಿಕುಮಾರ ನಾಯಕ ಇತರರಿದ್ದರು.