ವೀರವನಿತೆ “ಒನಕೆ ಓಬವ್ವರ” ಜನ್ಮದಿನ: ವಿಶೇಷ ಲೇಖನ

0
44

ಒನಕೆ ಓಬವ್ವ 18 ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ವೀರ ಮದಕರಿ ನಾಯಕನ ಕೋಟೆಯ ಕಾವಲುಗಾರ ಛಲವಾದಿ ಕಹಳೆ ಮುದ್ದಹನುಮಪ್ಪನ ಹೆಂಡತಿ. ಕನ್ನಡದ ವೀರನಾರಿ ಒನಕೆ ಓಬವ್ವಳನ್ನು ನಮ್ಮ ನಾಡಿನ ವೀರವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ರಾಣಿ ಬೆಳವಡಿ ಮಲ್ಲಮ್ಮ, ರಾಣಿ ಕೆಳದಿ ಚೆನ್ನಮ್ಮ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

ರಾಜ್ಯ ಸರ್ಕಾರ ಈ ವರ್ಷದಿಂದ ಅಂದರೆ 11-11-2021 ರಿಂದ ನಾಡಿನ ಹೆಮ್ಮೆಯ ಪ್ರತೀಕಳಾದ ವೀರನಾರಿ ಒನಕೆ ಓಬವ್ವಳ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲು ಆದೇಶ ಹೊರಡಿಸಿದೆ.

Contact Your\'s Advertisement; 9902492681

ಅವರ ಧೈರ್ಯ ಸಾಹಸ ನಮ್ಮ ಮಹಿಳೆಯರಿಗೆ ಆದರ್ಶವಾಗಲಿ. ಒನಕೆ ಓಬವ್ವ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ಛಲವಾದಿ ಕಹಳೆ ಚಿನ್ನಪ್ಪನ ಮಗಳು.

ಚಿತ್ರದುರ್ಗದ ಪಾಳೆಗಾರರು ಆಡಳಿತ ನಡೆಸುವ ಸಮಯದಲ್ಲಿ ಗುಡೇಕೋಟೆ ಸಂಸ್ಥಾನವು ಒಂದು ಸಾಮಂತ ರಾಜ್ಯವಾಗಿತ್ತು. ಈ ಸಂಸ್ಥಾನದಲ್ಲಿ ಛಲವಾದಿ ವಂಶಸ್ಥನಾದ ಚಿನ್ನಪ್ಪನೆಂಬುವನು ಆಗಿನ ದೊರೆಗಳಿಗೆ ಅಚ್ಚುಮೆಚ್ಚಿನ ಆಪ್ತ ಈ ಸೇವಕನೂ ಕಹಳೆಯವನೂ ಆಗಿದ್ದ. ಈತನಿಗೆ ಕದುರಪ್ಪ, ತಿಮ್ಮಣ್ಣ ಮತ್ತು ಓಬವ್ವ ಎಂಬ ಮೂವರು ಮಕ್ಕಳಿದ್ದರು.

ಒಮ್ಮೆ ಚಿತ್ರದುರ್ಗದ ಪಾಳೆಗಾರರು ತಮ್ಮ ಸಾಮಂತ ರಾಜ್ಯವಾಗಿದ್ದ ಗುಡೇಕೋಟೆಗೆ ರಾಜಕಾರ್ಯ ನಿಮಿತ್ತ ತಮ್ಮ ಆಪ್ತಸೇವಕನಾಗಿಯೂ-ಕಹಳೆಯವನಾಗಿಯೂ ಸೇವೆ ಸಲ್ಲಿಸುತ್ತಿದ್ದ ಛಲವಾದಿ ಕಹಳೆ ದೊಡ್ಡ ಹನುಮಪ್ಪನನ್ನು ಕಳುಹಿಸುತ್ತಾರೆ.

ಗುಡೇಕೋಟೆ ತಲುಪಿ ರಾಜಕಾರ್ಯ ಪೂರೈಸಿ ತನ್ನ ಬಂಧು ಕಹಳೆ ಚಿನ್ನಪ್ಪನ ಆಹ್ವಾನದ ಮೇರೆಗೆ ಆತನ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಸರ್ವಗುಣ ಸಂಪನ್ನೆಯಾಗಿ ತೋರಿದ ಚಿನ್ನಪ್ಪನ ಮಗಳಾದ ಓಬವ್ವಳನ್ನು ಕಂಡು ತನ್ನ ಮಗ ಕಹಳೆ ಮುದ್ದಹನುಮಪ್ಪನಿಗೆ ಇವಳೆ ತಕ್ಕ ವಧುವೆಂದು ಮನದಲ್ಲಿ ನಿರ್ಧರಿಸಿದ. ತನ್ನ ಇಂಗಿತವನ್ನು ಚಿನ್ನಪ್ಪನಿಗೆ ಸೂಕ್ಷ್ಮವಾಗಿ ತಿಳಿಸಿ ಚಿತ್ರದುರ್ಗಕ್ಕೆ ಹಿಂತಿರುಗಿದ.

ಆನಂತರ ಗುಡೇಕೋಟೆ ಕಹಳೆ ಚಿನ್ನಪ್ಪನ ಮಗಳು ಓಬವ್ವಳನ್ನು ಚಿತ್ರದುರ್ಗದ ಛಲವಾದಿ ಕಹಳೆ ದೊಡ್ಡ ಹನುಮಪ್ಪನ ಮಗ ಮುದ್ದಹನುಮಪ್ಪನಿಗೆ ತಂದುಕೊಂಡು ಶಾಲಿವಾಹನ ಶಕೆ 1683 ವರ್ಷ ಸಂವತ್ಸರ ವೈಶಾಖ ಶುದ್ಧ ಪಂಚಮಿಯಂದು, ಅಂದರೆ ಕ್ರಿ.ಶ.1761ರಲ್ಲಿ ಉಭಯ ದೊರೆಗಳ ಮನ್ನಣೆಯೊಂದಿಗೆ ಗುರು- ಲಿಂಗ- ಜಂಗಮರ ಆಶೀರ್ವಾದದೊಡನೆ ಅಪಾರ ಬಂಧು ಬಳಗದವರ ಸಮ್ಮುಖದಲ್ಲಿ ವಿವಾಹವು ಚಿತ್ರದುರ್ಗದಲ್ಲಿ ಬಹು ವಿಜೃಂಭಣೆಯಿಂದ ನೆರವೇರಿತು.

ವಿವಾಹ ನಂತರ ಓಬವ್ವ ಸದ್ಗೃಹಿಣಿಯಾಗಿ ಚಿತ್ರದುರ್ಗದ ಕೋಟೆಯಲ್ಲಿದ್ದ ತನ್ನ ಗಂಡನ ಮನೆ ಸೇರಿದಳು.
ಆದರೆ ಆ ಸುಖ ಸಂತೋಷ ಬಹುಕಾಲ ಉಳಿಯಲಿಲ್ಲ.
ಒಮ್ಮೆ ಹೈದರಾಲಿಯು ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದ, ಅಂದು ಬುಧವಾರ: ಶಾಲಿವಾಹನ ಶಕೆ 1688.(ಅಂದರೆ ಕ್ರಿ.ಶ.1766 ಅಕ್ಟೋಬರ್ ತಿಂಗಳು.)

ತಾನು ಆಳ್ವಿಕೆ ಮಾಡುವ ರಾಜ್ಯವನ್ನು ,ಆಡಳಿತ ಪ್ರದೇಶವನ್ನು ವೈರಿಗಳಿಂದ ಕಾಪಡುವುದು ಅದರ ರಕ್ಷಣೆ ಮಾಡುವುದು ಅಲ್ಲಿನ ರಾಜನ ಅಥವ ರಾಣಿಯ ಕರ್ತವ್ಯ.

ಹೀಗಿದ್ದೂ ಕೋಟೆಯ ಕಾವುಲುಗಾರನ ಹೆಂಡತಿ ಯಾವುದೆ ಯುದ್ದ ಕೌಶಲ್ಯ, ತರಬೇತಿ ತಿಳಿಯದ, ಸಾಮಾನ್ಯ ಮಹಿಳೆ, ವೈರಿಗಳಿಂದ ತನ್ನ ಕೋಟೆಯನ್ನು ರಕ್ಷಣೆ ಮಾಡಿದ ಆ ದಿಟ್ಟ ಹೋರಾಟವನ್ನು ಎಲ್ಲರು ಮೆಚ್ಚಲೇಬೇಕು.
ಆ ವೀರವನಿತೆ ಬೇರೆ ಯಾರು ಅಲ್ಲ, ದೇಶದಲ್ಲಿ ಬಹುಸಂಖ್ಯಾತರಾಗಿರುವ ಛಲವಾದಿ, ಹೋಲೆಯ (ಬಲಗೈ) ಸಮುದಾಯದಕ್ಕೆ ಸೇರಿದವಳು ಒನಕೆ ಓಬ್ಬವ್ವ.

ಚಿತ್ರದುರ್ಗದ ಕೋಟೆಯ ಮೇಲೆ ಹಠಾತ್ತಾಗಿ ಆಕ್ರಮಣ ಮಾಡಿ, ಕೋಟೆಯ ಗುಪ್ತಮಾರ್ಗವನ್ನು ತಿಳಿದುಕೊಂಡು,ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಪ್ಪನು ಊಟಕ್ಕೆ ಕುಳಿತ ಸಮಯವನ್ನು ಸಾಧಿಸಿ,ಕೋಟೆಯ ಕಿಂಡಿ ಅಥವ ರಂಧ್ರದ ಮೂಲಕ ಹೈದರಾಲಿಯು ತನ್ನ ಸೈನಿಕರನ್ನು ಚಿತ್ರದುರ್ಗದ ಕೋಟೆಯ ಒಳಗೆ ನುಗ್ಗಿಸುತ್ತಿದ್ದನು.

ಈ ಸಮಯದಲ್ಲಿ ಪತಿಗೆ ಕುಡಿಯಲು ನೀರನ್ನು ತರಲು ಹೋದಾಗ ಶತ್ರು ಸೈನಿಕರು, ಕೋಟೆಯ ಒಳಗೆ ನುಗ್ಗುತ್ತಿರುವುದನು ಕಂಡು ಊಟಕ್ಕೆ ಕುಳಿತ ಪತಿಗೆ ಭಂಗವಾಗಬಾರದೆಂದು ಶತ್ರುಗುಳ ವಿಷಯ ಪತಿಗೆ ತಿಳಿಸದೆ, ಮನೆಯಲ್ಲಿದ್ದ ಒನಕೆಯನ್ನು ಶತ್ರುಗಳ ಸಂಹಾರಕ್ಕೆ ತನ್ನ ಅಸ್ತ್ರವಾಗಿ ಇಟ್ಟುಕೊಂಡು ಒಬ್ಬೊಬ್ಬರನ್ನಾಗಿ ಶತ್ರುಗಳನ್ನು ಯಮಪುರಿಗೆ ಅಟ್ಟಿದ ದಿಟ್ಟ ಮಹಿಳೆ ಒನಕೆ ಓಬವ್ವ, ಕೊನೆಯಲ್ಲಿ ತನ್ನ ಹಿಂದಿನಿಂದ ಆಕ್ರಮಣ ಮಾಡಿದ
ಶತ್ರುವಿನ ಇರಿತಕ್ಕೆ ಒಳಗಾಗಿ ವೀರಮರಣವನ್ನಪ್ಪಿದಳು. ಹೀಗೆ ವೀರೋಚಿತ ಸಾವಿನ ಮೂಲಕ ನಾಡಿನ ಇತಿಹಾಸದ ಪುಟಗಳಲ್ಲಿ ಅಮರಳಾದಳು.

ಒಬವ್ವ ಳ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಆಕೆಯನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬಳೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಆಕೆಯ ಹೆಸರನ್ನಿಟ್ಟು ಆಕೆಗೆ ಗೌರವಿಸಲಾಗಿದೆ.

ಓಬವ್ವ ಅವರು ಕನ್ನಡ ಸ್ತ್ರೀಯರಲ್ಲಿ ಹೆಮ್ಮೆಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.

ಇವರು ನಮ್ಮ ನಾಡಿನ ಆದರ್ಶ ಮಹಿಳೆ, ಇವರ ಆದರ್ಶ, ಧೈರ್ಯ ಶೌರ್ಯ, ಸಾಹಸ ನಮ್ಮ ಮಹಿಳೆಯರಿಗೆ ಸ್ಫುರ್ತಿಯ ಸೆಲೆಯಾಗಲಿ.

ಇವರ ಏಕೈಕ ಪುತ್ರ ಆನೆಪ್ಪ. ಈ ವೀರನಾರಿಯ ವಂಶಸ್ಥರು ಈಗಲೂ ಚಿತ್ರದುರ್ಗ ಹಾಗೂ ಗುಡೇಕೋಟೆಯಲ್ಲಿ ಇದ್ದಾರೆ. ಕನ್ನಡ, ನಾಡು-ನುಡಿ, ನೆಲ-ಜಲ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ, ಮಹಾಮಾತೆ, ವೀರನಾರಿ ಒನಕೆ ಓಬವ್ವುಳನ್ನು ಕನ್ನಡನಾಡು ಸದಾಕಾಲ ಸ್ಮರಿಸುತ್ತದೆ.

(ಸಂಗ್ರಹ) ಕೃಪೆ: ಅಂತರ್ಜಾಲ ಹಾಗೂ ಒನಕೆ ಓಬವ್ವಳ ಆಯ್ದ ಪುಸ್ತಕಗಳು.

ಲೇಖಕರು:
ಪ್ರೊ.ಯಶವಂತರಾಯ್ ಅಷ್ಠಗಿ
ಚಿಂತಕರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here