ಪುಣ್ಯಪಾಪಗಳೆಂಬವು ತಮ್ಮ ಇಷ್ಟ ಕಂಡಿರೆ
ಅಯ್ಯಾ ಎಂದರೆ ಸ್ವರ್ಗ ಎಲವೊ ಎಂದಡೆ ನರಕ
ದೇವಾ ಭಕ್ತ ಜಯ ಜೀಯಾ ಎಂಬ ನುಡಿಯೊಳಗೆ
ಕೈಲಾಸವಿಪ್ಪುದು ಕೂಡಲಸಂಗಮದೇವಾ
-ಬಸವಣ್ಣ
ಬದುಕಿನಲ್ಲಿ ನಾವು ಪಡೆಯಬೇಕಾದದ್ದು ಏನು? ಯಾವುದನ್ನು ಸಾಧಿಸಬೇಕು? ಯಾವುದನ್ನು ಸಾಧಿಸಿದರೆ ಸಾರ್ಥಕ ಬದುಕು ಉಂಟಾಗುತ್ತದೆ? ಇದು ಪ್ರಶ್ನೆ ವರುಷ ವರುಷಗಳ ಕಾಲ ನಾವು ಬದುಕುವುದಿದೆ. ಬದುಕು ಹೂವಿನ ಹಾಸಿಗೆಯನಲ್ಲ. ಇಲ್ಲಿ ಕಷ್ಟ-ನಷ್ಟಗಳು ಇರುತ್ತವೆ. ಇದೇ ದಾರಿಯಲ್ಲಿ ನಮ್ಮಷ್ಟಕ್ಕೆ ನಾವೇ ನಡೆಯಬೇಕಾಗುತ್ತದೆ. ಬದುಕು ಅಪ್ಯಾಯಮಾನವಾಗಲು ದೇಹ, ಮನಸ್ಸು, ಬುದ್ಧಿ ಮಾತು ಚೆನ್ನಾಗಿರಬೇಕು. ಪ್ರಣತೆ, ಬತ್ತಿ, ಎಣ್ಣೆ ಎಲ್ಲವೂ ಸ್ವಚ್ಛ ಇರುವಾಗ ದೀಪ ಬೆಳಗುತ್ತದೆ. ಎಲ್ಲ ಕಡೆ ಪ್ರಕಾಶ ಕೊಡುತ್ತದೆ. ಜೀವನ ಒಂದು ದೀಪ ಇದ್ದಂತೆ. ಅದು ಬೆಳಗಬೇಕು.
ಬೆಳಕು ಚೆಲ್ಲಬೇಕು. ಕತ್ತಲೇ ದೂರ ಸರಿಸಬೇಕು. ಸಂತೋಷದ ಸುಗಂಧ ಹರಡಬೇಕು. ಪ್ರಣತೆ ಕಟ್ಟಿಯಾಗಿರಬೇಕು. ಎಣ್ಣೆಯಲ್ಲಿ ನೀರು ಸೇರಬಾರದು. ಬತ್ತಿಯೂ ಸ್ವಚ್ಛ ಇರಬೇಕು. ಇವೆಲ್ಲದರ ಜೊತೆಗೆ ಪ್ರಾಣವಾಯುಬೇಕು. ಒಳ್ಳೆಯ ಶರೀರ, ಮನ, ಮಾತು ಇದ್ದಾಗ ಹೃದಯದ ಭಾವನೆ ಸ್ವಚ್ಛವಾಗಿರುತ್ತದೆ. ಒಳ್ಳೆಯದನ್ನು ನೋಡಿ ಸಂತಸ ಪಡುವ ಹೃದಯ ಇರಬೇಕು. ನಾವು ಆಡುವ ಮಾತು ಜಗತ್ತನ್ನು ಹೊಲಸು ಮಾಡಬಾರದು. ಸಂತೋಷ, ಶಾಂತಿ, ಜ್ಞಾನ ಹರಡುವ ಕಾರ್ಯ ಆಗಬೇಕು.
ಮಾತೆಂಬುದು ಜ್ಯೋರ್ತಿಲಿಂಗ ಮಾತು ತಪ್ಪಬಾರದು. ಮಾತು ಲಿಂಗ ಅಭಿವ್ಯಕ್ತಗೊಳಿಸುವ ಶಕ್ತಿ ಹೊಂದಿರಬೇಕು. ಸತ್ಯ ಸೌಂದರ್ಯ ಶಾಂತಿ ವ್ಯಕ್ತವಾಗಬೇಕು. ಮಾತೇ ಮಂತ್ರ. ಮನುಕುಲ ಅಭಿವೃದ್ಧಿ ಹೊಂದಿರುವುದಕ್ಕೆ ಮಾತೆ ಮೂಲ ಕಾರಣ. ಸಂತೋಷ ವ್ಯಕ್ತಪಡಿಸಲು ಮಾತುಬೇಕು. ಮಾತಿನಿಂದ ಪ್ರಸನ್ನತೆ ಉಂಟಾಗುವುದು. ಒಳ್ಳೆಯ ಮಾತಾಡುವುದನ್ನು ಕಲಿತು ಸ್ವರ್ಗ ನಿರ್ಮಾಣ ಮಾಡಬೇಕು. ನಮ್ಮ ಮಾತು ಹಾಡಾಗಬೇಕು. ಕಥೆಯಾಗಬೇಕು. ಮಂತ್ರ ಆಗಬೇಕು. ಮಹಾತ್ಮರ ಸಣ್ಣ ಸಣ್ಣ ಮಾತುಗಳೆ ಅದ್ಭುತ ಮಂತ್ರಗಳು. ಸತ್ಯದ ಛಾಯೆ, ಶಾಂತಿಯ ತಂಪು ಹರಡಬೇಕು. ಮನೆಯ ಇರಲಿ. ಮನವೇ ಇರಲಿ. ಅಲ್ಲಿ ಶಾಂತಿ ನೆಲೆಗೊಳ್ಳಬೇಕು.
ಪ್ರಾಣಿಗಳಿಗೆ ಮಾತಾಡುವ ಶಕ್ತಿ ಇಲ್ಲ. ಜಗತ್ತನ್ನು ಕಟ್ಟಬೇಕಾದರೆ ಮಾತು ಬೇಕು. ದೇವರು ಮನುಷ್ಯನಿಗೆ ಮಾತಾಡುವ ಶಕ್ತಿ ಕೊಟ್ಟಿದ್ದಾನೆ. ಬಸವಣ್ಣ ಎಂಬ ಶಬ್ದ ಉಚ್ಛರಿಸಿದೊಡನೆ ನಮಗೆ ೧೨ನೇ ಶತಮಾನದ ಕಾಲ ನೆನಪಾಗುತ್ತದೆ. ನಮ್ಮ ಮನಸ್ಸು ಅಲ್ಲಿಗೆ ಹೋಗುತ್ತದೆ. ಹಾಗಾಗಿ ಮಾತು ದೇವರು. ದೇವಯಾನವೇ ಈ ಮಾತು. ದೇವಲೋಕಕ್ಕೆ ಬಟ್ಟೆ ಕಾಣಿರೋ, ದೇವಲೋಕಕ್ಕೆ ಹೋಗುವ ದಾರಿ ಇದೇ ಕಾಣಿರೊ ಜೀವನ ಎಂದರೆ ಬರೀ ಮಾತು. ಮಾತು ಸುಂದರ ಇದ್ದರೆ ಜೀವನವು ಸುಂದರ.
ಅಯ್ಯಾ ಎಂದರೆ ಸ್ವರ್ಗ ಎಲವೊ ಎಂದರೆ ನರಕ. ಎಂಬ ಬಸವಣ್ಣನವರ ವಚನದಂತೆ ಸ್ವರ್ಗ ನರಕ ಎರಡು ಕಟ್ಟುವ ಶಕ್ತಿ ಮಾತಿಗಿದೆ. ಇವೆಲ್ಲ ಕೇವಲ ಶಬ್ದಗಳು. ಶಬ್ದಗಳಿಂದ ಅಂತಹ ಸ್ವರ್ಗ ನರಕ ನಿರ್ಮಾಣವಾಗಲು ಸಾಧ್ಯವಿದೆ. ವಸ್ತುಗಳಿಂದ ನಿರ್ಮಾಣವಾಗುವುದಿಲ್ಲ. ಮಾತಿನಿಂದ ನಿರ್ಮಾಣವಾಗುತ್ತದೆ. ಹಿಂದಿನವರ ಸಂಪತ್ತಿಗಿಂತ ಮಾತು ಮುಖ್ಯ. ಅವರ ಮಾತು ಮನ ಅರಳಿಸುತ್ತದೆ. ಮಾತು ಸತ್ಯದಿಂದ ತುಂಬಿರಬೇಕು.
ಸತ್ಯ ಇಲ್ಲದ ಮಾತು ಮಾತೇ ಅಲ್ಲ. ಸತ್ಯ ಇಲ್ಲದ್ದು ಧರ್ಮವೇ ಅಲ್ಲ. ಸತ್ಯವನ್ನು ಪ್ರೀತಿಸಬೇಕು. ಸತ್ಯವನ್ನು ಆರಾಧಿಸಬೇಕು. ಕಾರ್ಯ ಮಾಡುವ ಕೈಗಳಲ್ಲಿ ಸತ್ಯ ತುಂಬಿರಬೇಕು. ಸಾಗುವ ದಾರಿಯಲ್ಲಿ ಸತ್ಯವೇ ಹರಡಬೇಕು. ವಿಶ್ವದ ತುಂಬಾ ಒಂದೇ ಒಂದು ಸತ್ಯ ಇದೆ. ಸತ್ಯಕ್ಕೆ ಈ ದೇಶ ಆ ದೇಶ ಎಂಬ ಭೇದವಿಲ್ಲ. ಅಂತಹ ಸತ್ಯ ಕಾಣುವ ಕುತೂಹಲ ಕಣ್ಣುಗಳಲ್ಲಿ ಇರಬೇಕು. ಇರುವ ಸತ್ಯವೆಲ್ಲ ದೇವರು ಅಸತ್ಯ ದೇವರೆ ಅಲ್ಲ. ಬದಲಾಗದಂತೆ ನಿತ್ಯವು ಇರುವುದೇ ಸತ್ಯ. ಹಿಂದೆ, ಈಗ ಮುಂದೆ ಎಂದೆಂದಿಗೂ ಇರುವುದೇ ಸತ್ಯ.
ಜೀವನದಲ್ಲಿ ಸತ್ಯದ ಇಲ್ಲದಿದ್ದರೆ ತನ್ನ ವೈಭವ ಕಳೆದುಕೊಳ್ಳುತ್ತದೆ. ಮಾತು ಕೃತಿಗೆ ಇಳಿಯಬೇಕು. ಸತ್ಯ ತಿಳಿದು ಆಚರಿಸಬೇಕು. ಸತ್ಯ ಅಸತ್ಯದ ವ್ಯತ್ಯಾಸ ತಿಳಿಯಬೇಕು. ಮಾಡುವ ಕಾರ್ಯದಲ್ಲಿ ಕೇವಲ ಸತ್ಯ ಇರಬೇಕು. ಅನಿವಾರ್ಯಕ್ಕಾಗಿ ಅಸತ್ಯ ನುಡಿದರೆ ಅದರ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಕೃತಿಯಲ್ಲಿ ಸತ್ಯ, ಮಾತಿನೊಳಗೆ ಸತ್ಯ, ಎದೆಯೊಳಗೆ ಸತ್ಯ ಇರುವುದೇ ಆಧ್ಯಾತ್ಮ ಮಾರ್ಗ. ಒಂದು ಸಣ್ಣ ಹಳ್ಳ ಹೊಳೆಯಾಗಿ, ನದಿಯಾಗಿ, ಮಹಾನದಿಯಾಗಿ ಕೊನೆಗೆ ಸಾಗರದಲ್ಲಿ ಐಕ್ಯವಾಗುತ್ತದೆ. ಹಾಗೆ ಸತ್ಯ ಎಲ್ಲರಿಗೂ ಅನ್ವಯಿಸುತ್ತದೆ. ಭಾರತೀಯರಿಂದ ಪಾಶ್ಚಿಮಾತ್ಯರ ವರೆಗೆ ಬಾಲ್ಯದಿಂದ ವೃದ್ಧರವರೆಗೆ ಎಲ್ಲರಿಗೂ ಒಂದೇ ಸತ್ಯ ಇದೆ. ಭೂಮಿಗೆ ಭೂಮಾತೆ ಎನ್ನುತ್ತೇವೆ. ಏಕೆಂದರೆ ಎಲ್ಲರಿಗೂ ಅನ್ನ ನೀಡುತ್ತದೆ. ಅಸತ್ಯ ಅಳಿಯಲೇಬೇಕು. ಧರ್ಮ ಬೇರೆ ಅಲ್ಲ, ಸತ್ಯ ಬೇರೆ ಅಲ್ಲ.
ಜಗತ್ತಿನ ಹಿಂದೆ ಒಂದು ಸತ್ಯ ಅಡಗಿದೆ. ಅಸತ್ಯದ ಆವರಣ ತೆಗೆದಾಗ ಸತ್ಯ ಕಾಣುತ್ತದೆ. ದೇವರು ಸತ್ಯದ ಪ್ರೇಮಿ. ಧರ್ಮಪ್ರೇಮಿ. ಇರುವುದನ್ನು ಸಿದ್ಧಮಾಡಬಹುದು. ಇಲ್ಲದ್ದನ್ನು ಸಿದ್ಧಮಾಡಲಾಗದು. ಅಸತ್ಯಕ್ಕೆ ಅಜ್ಞಾನವೇ ನೆಲೆಯಾಗಿದೆ. ಆದರೆ ಅದು ನಡೆಯದು. ಸತ್ಯದ ಮೇಲೆಯೇ ಜಗತ್ತು ನಿಂತಿದೆ. ಅಂತಹ ಸತ್ಯ ಆರಾಧಿಸಬೇಕು.
ಒಳ್ಳೆಯ ಮಾತು ಮಾಡಬೇಕು. ಒಳ್ಳೆಯ ಕಾರ್ಯ ಮಾಡಬೇಕು. ಒಳ್ಳೆಯದನ್ನೇ ವಿಚಾರಿಸಬೇಕು. ಸತ್ಯವು ನೀತಿಯ ಮುಖ್ಯ ಅಂಗವಾಗಿದೆ. ನೀತಿಯ ಮಾರ್ಗದಲ್ಲಿ ಒಂದಿಲ್ಲ ಒಂದು ದಿನ ಬದುಕು ಅರಳುತ್ತದೆ. ಋಷಿಗಳು, ಸಂತರು, ಶರಣರು ಸತ್ಯವನ್ನೇ ಪ್ರೀತಿಸಿದರು. ನಾವು ಕೂಡ ಸತ್ಯವನ್ನೇ ಪ್ರೀತಿಸಬೇಕು. ಬದುಕಿಗೆ ಬೆಲೆ ಬರಲು ಮಾತು, ಕೃತಿ, ಭಾವಗಳಲ್ಲಿ ಸತ್ಯ ಇರಬೇಕು. ಹೃದಯದಲ್ಲಿ ಸತ್ಯ ತುಂಬಲಿ, ಸತ್ಯ ನೆಲೆಸಲಿ.