ರಾಯಚೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ಮಾನವ ದಿನಗಳ ಸೃಜನೆಯು ಡಿಸೆಂಬರ್ ಕೊನೆಯ ವಾರ ಒಂದು ಕೋಟಿ ಗಡಿದಾಟಿದ್ದು, ರಾಜ್ಯದ ಇನ್ನುಳಿದ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರು ಎರಡನೇ ಸ್ಥಾನದಲ್ಲಿದೆ.
ಮೊದಲ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಒಂದು ಕೋಟಿ 9 ಲಕ್ಷಕ್ಕೂ ಅಧಿಕ ಮಾನವ ದಿನಗಳ ಸೃಜನೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ 1,00,20,821 ಮಾನವ ದಿನಗಳ ಸೃಜನೆ ಮಾಡಲಾಗಿದೆ. ಹಣಕಾಸು ವರ್ಷ ಪೂರ್ಣವಾಗುವುದಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದ್ದು, ಹಿಂದಿನ ವರ್ಷಗಳ ಗುರಿಮೀರಿ ಜಿಲ್ಲೆಯಲ್ಲಿ ಮಾನವ ದಿನಗಳ ಸೃಜನೆಯಾಗುವ ನಿರೀಕ್ಷೆ ಇದೆ.
2020-21ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ 1.21 ಕೋಟಿ ಮಾನವ ದಿನಗಳ ಸೃಜನೆ ಮಾಡಲಾಗಿತ್ತು. ಬೆಳಗಾವಿ ಜಿಲ್ಲೆಯು 1.27 ಕೋಟಿಗೆ ತಲುಪಿತ್ತು. ಅದಕ್ಕೂ ಹಿಂದಿನ ವರ್ಷ 2019-20ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ 1.11 ಕೋಟಿ ಮಾನವ ದಿನಗಳನ್ನು ಸೃಜಿಸುವ ಮೂಲಕ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿತ್ತು. ಒಂದು ಕೋಟಿಗೂ ಅಧಿಕ ಮಾನವ ದಿನಗಳನ್ನು ಸೃಜಿಸಿದ ಮೊದಲ ಜಿಲ್ಲೆಯಾಗಿ ಗಮನ ಸೆಳೆದಿತ್ತು. ಪ್ರಸಕ್ತ ಸಾಲಿಗೆ ಹಿಂದಿನ ವರ್ಷದ ಗುರಿ ನಿಗದಿಯಾಗಿದೆ.
ಈ ವರ್ಷ ರಾಯಚೂರು ಜಿಲ್ಲೆಯಲ್ಲಿ 2,31,758 ಕುಟುಂಬಗಳು ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಪಡೆದುಕೊಂಡಿವೆ. 803 ಕುಟುಂಬಗಳು 150 ದಿನಗಳನ್ನು ಪೂರ್ಣಗೊಳಿಸಿದ್ದರೆ, 777 ಕುಟುಂಬಗಳು 100 ದಿನಗಳವರೆಗೂ ಉದ್ಯೋಗ ಪಡೆದಿವೆ. ಹೊಸದಾಗಿ 21,669 ಕುಟುಂಬಗಳಿಗೆ ಹೊಸದಾಗಿ ಜಾಬ್‌ಕಾರ್ಡ್ ನೀಡಲಾಗಿದೆ.
214 ಅಂಗನವಾಡಿಗಳ ನಿರ್ಮಿಸಲಾಗುತ್ತಿದ್ದು, 61 ಕಟ್ಟಡಗಳು ಪೂರ್ಣವಾಗಿವೆ. ಇದಕ್ಕಾಗಿ ₹7.95 ಕೋಟಿ ಖರ್ಚು ಮಾಡಲಾಗಿದೆ. 19 ಶಾಲೆಗಳಲ್ಲಿ ಮೈದಾನ ನಿರ್ಮಿಸಲಾಗಿದ್ದು, ಮೂರು ಕಡೆ ಪೂರ್ಣವಾಗಿವೆ. 63 ಕಡೆಗಳಲ್ಲಿ ಗೋದಾಮು ನಿರ್ಮಾಣ ಪ್ರಗತಿಯಲ್ಲಿದ್ದು, 29 ಪೂರ್ಣಗೊಳಿಸಲಾಗಿದೆ. ಪರಿಕರಗಳಿಗಾಗಿ (ಮಟಿರಿಯಲ್) ಮಾಡಿರುವ ಖುರ್ಚಿನ ಮೊತ್ತ ಬಹುತೇಕ ಇನ್ನೂ ಜಮೆ ಆಗಿಲ್ಲ.
ಒಟ್ಟಾರೆ ಸಾಧನೆ ಪ್ರಮಾಣವು ಈ ವರ್ಷ ಶೇ 11.59 ರಷ್ಟಿದೆ. 33,898 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ 3,929 ಮಾತ್ರ ಪೂರ್ಣಗೊಂಡಿದ್ದು, ಇನ್ನೂ 29,969 ಕಾಮಗಾರಿಗಳು ಮುಗಿದಿಲ್ಲ. 2020-21ನೇ ನೇ ಸಾಲಿನಲ್ಲಿ ಶೇ 87.37 ಸಾಧನೆ ಮಾಡಲಾಗಿತ್ತು.