ಶಿಕ್ಷಣ ಬದುಕಾಗದೆ ಹೋರಾಟದ ಅಸ್ತ್ರವಾಗಬೇಕು: ಗುಂಡಮ್ಮ

0
28

ವಾಡಿ: ಜೀವನದುದ್ದಕ್ಕೂ ಸಂಪಾದಿಸಿದ ಶಿಕ್ಷಣ ಜ್ಞಾನವನ್ನು ಕೇವಲ ವೈಯಕ್ತಿಕ ಬದುಕಿಗೆ ಸೀಮಿತವಾಗಿಸಿಕೊಳ್ಳದೆ ಅದು ಶೋಷಣೆಗೊಳಗಾದ ಜನರ ಹೋರಾಟಗಳ ಅಸ್ತ್ರವಾಗಬೇಕು. ಈ ವಿಷಯದಲ್ಲಿ ಮಹಿಳಾ ಶಿಕ್ಷಣದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಬದುಕು ನಮಗೆ ಆದರ್ಶವಾಗಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ಹೇಳಿದರು.

ಎಐಎಂಎಸ್‌ಎಸ್ ಮಹಿಳಾ ಸಂಘಟನೆ ವತಿಯಿಂದ ಪಟ್ಟಣದ ಎಸ್‌ಯುಸಿಐ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮೌಢ್ಯ, ಅಜ್ಞಾನ ಹಾಗೂ ಅಂಧಕಾರದಲ್ಲಿ ಮುಳುಗಿ ಪುರುಷ ಪ್ರಧಾನ ವ್ಯವಸ್ಥೆಯಿಂದ ಶೋಷಣೆಗೊಳಗಾಗಿದ್ದ ಹೆಣ್ಣುಮಕ್ಕಳಿಗೆ ಅಕ್ಷರ ಜ್ಞಾನ ನೀಡುವಲ್ಲಿ ಇಡೀ ಬದುಕು ಮೀಸಲಿಟ್ಟ ಸಾವಿತ್ರಿಬಾಯಿ ಫುಲೆ ಮತ್ತು ಅವರ ಪತಿ ಜ್ಯೋತಿಬಾ ಫುಲೆ ಮಹಾನ್ ವ್ಯಕ್ತಿಗಳಾಗಿದ್ದಾರೆ. ಇವರೊಂದಿಗೆ ಶೈಕ್ಷಣಿಕ ಕ್ರಾಂತಿಗೆ ದನಿಯಾಗಿ ನಿಂತ ಮುಸ್ಲಿಂ ಸಮುದಾಯದ ಮೊದಲ ಶಿಕ್ಷಿತ ಮಹಿಳೆ ಫಾತಿಮಾ ಶೇಖ್ ಸಮಾಜದಲ್ಲಿ ಒಂದು ಹೊಸ ಸಂಚಲನ ಮೂಡಿಸಿದ್ದರು.

Contact Your\'s Advertisement; 9902492681

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಇವರು ತೆರೆದ ಶಾಲೆಗಳನ್ನು ಮುಚ್ಚಲು ಅಂದಿನ ಮಹಿಳಾ ಶಿಕ್ಷಣ ವಿರೋಧಿಗಳು ಶತಾಯಗತಾಯ ಪ್ರಯತ್ನಿಸಿದ್ದರು. ಕೀಳು ಪದಗಳಿಂದ ಟೀಕಿಸಿ ಅವಮಾನ ಮಾಡಿದರು. ಮೈಮೇಲೆ ಕೆಸರೆರಚಿ ವಿಕೃತಿ ಮೆರೆದರು. ತಂತ್ರ ಕುತಂತ್ರಗಳನ್ನು ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಆದರೂ ಎದೆಗುಂದದ ಈ ಫುಲೆ ದಂಪತಿಗಳು, ಹೆಣ್ಣಿನ ನಾಲಿಗೆಯ ಮೇಲೆ ಅಕ್ಷರಗಳನ್ನು ಬರೆದು ಅವರ ಹಣೆಬರಹವನ್ನೇ ಬದಲಿಸಿದರು ಎಂದರು.

ದೇಶದ ವಿವಿಧ ಕ್ಷೇತ್ರಗಳಲ್ಲದೆ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ ಎಂದರೆ ಅದಕ್ಕೆ ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಫಾತಿಮಾ ಶೇಖ್, ರಾಜಾರಾಮ ಮೋಹನರಾಯ, ಈಶ್ವರಚಂದ್ರ ವಿದ್ಯಾಸಾಗರ ಕಾರಣರಾಗಿದ್ದಾರೆ. ಆದರೆ ಇಂದು ಅಕ್ಷರ ಜ್ಞಾನ ಪಡೆದ ಮಹಿಳೆಯರು ಹೊಟ್ಟೆಪಾಡಿಗಾಗಿ ಹುದ್ದೆಗಳನ್ನು ಹುಡುಕಿಕೊಂಡು ಹೋಗುತ್ತಿರುವುದು ಬದುಕಿನ ಅವಶ್ಯಕತೆಯಾದರೂ ಶಿಕ್ಷಣದಿಂದ ವಂಚಿತವಾಗುತ್ತಿರುವ ಮತ್ತು ಶೋಷಣೆ, ದೌರ್ಜನ್ಯ, ಕಿರುಕುಳ ಸೇರಿದಂತೆ ಮುಂತಾದ ಸಾಮಾಜಿಕ ಸಮಸ್ಯೆಗಳಿಂದ ಬಂಧನದ ಬದುಕು ಅನುಭವಿಸುತ್ತಿರುವವರಿಗೆ ನ್ಯಾಯ ಕೊಡಿಸಲು ಚಿಂತಿಸದಿರುವುದನ್ನು ಕಾಣುತ್ತಿದ್ದೇವೆ ಎಂದು ವಿಷಾಧಿಸಿದ ಗುಂಡಮ್ಮ, ನಾವಷ್ಟೇ ಜಾಗೃತರಾದರೆ ಸಾಲದು. ಮಹಿಳಾ ಸಮಾಜವನ್ನು ಜಾಗೃತಗೊಳಿಸಿ ಹೋರಾಟದ ಹಾದಿಗೆ ತರಲು ಪ್ರತಿಯೊಬ್ಬ ಶಿಕ್ಷಿತ ಮಹಿಳೆ ಮುಂದೆ ಬರಬೇಕು ಎಂದು ವಿವರಿಸಿದರು.

ಶಿಕ್ಷಕಿ ಪದ್ಮರೇಖಾ ವಿ.ಕಾಳೆಬೆಳಗುಂದಿ ಮಾತನಾಡಿ, ಎಲ್ಲಾ ಸಮುದಾಯದ ಮಹಿಳೆಯರಿಗೆ ಶಿಕ್ಷಣ ಕೊಡಲು ಪಣ ತೊಟ್ಟ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಮಾಜದಿಂದ ಪ್ರತಿರೋಧಗಳು ಹೆಚ್ಚಾದವು. ಅಸ್ಪೃಷ್ಯತೆ ಆಚರಣೆ ಎಂಬುದು ಎಲ್ಲಾ ಮಹಿಳೆಯರನ್ನು ಕಾಡಿತ್ತು. ಇನ್ನೊಂದೆಡೆ ಪ್ಲೇಗ್ ರೋಗ ಜನರ ಪ್ರಾಣಕಂಟಕವಾಗಿ ಎದುರಾಗಿತ್ತು. ರೋಗದಿಂದ ಜನರನ್ನು ರಕ್ಷಿಸುವ ಜತೆಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವುದು ಸಾಮಾನ್ಯ ಕೆಲಸವಾಗಿರಲಿಲ್ಲ. ಎಲ್ಲಾ ಅಡೆತಡೆಗಳನ್ನು ದಿಟ್ಟತನದಿಂದ ಎದುರಿಸಿ ನಮ್ಮ ಬಾಳಿಗೆ ಜ್ಞಾನದ ಜ್ಯೋತಿಯಾದರು. ಅವರು ಹಚ್ಚಿದ ಶಿಕ್ಷಣದ ಜ್ಯೋತಿಯನ್ನು ನಾವಿಂದು ಎತ್ತಿ ಹಿಡಿಯಲು ಸಂಘಟಿತರಾಗಬೇಕಿದೆ ಎಂದರು.

ಎಐಎಂಎಸ್‌ಎಸ್ ಮಹಿಳಾ ಸಂಘಟನೆಯ ನಗರ ಸಮಿತಿ ಸದಸ್ಯರಾದ ಜಯಶ್ರೀ ಜಿ.ಕುಂಬಾರ, ಕೋಕಿಲಾ ಶರಣು ಹೇರೂರ, ಶಿವಲೀಲಾ ರಮೇಶ ಹಡಪದ, ಶರಣಮ್ಮ ಕುಂಬಾರ, ಸೀತಾಬಾಯಿ ಎಂ.ಹೇರೂರ, ಶರಣಮ್ಮ ಹಡಪದ, ಜ್ಯೋತಿ ರಾಜು ಒಡೆಯರಾಜ, ಶಾಂತಮ್ಮ ನಾಯ್ಕೋಡಿ, ಲಕ್ಷ್ಮೀ ಎಸ್.ಹೇರೂರ, ರೇಣುಕಾ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here