ಆಳಂದ: ಯುವಜನತೆ ವಿವೇಕದಿಂದ ವಿವೇಕಾನಂದರನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಣಮಂತ ಶೇರಿ ಖಜೂರಿ ಅಭಿಪ್ರಾಯಪಟ್ಟರು.
ತಾಲೂಕಿನ ತೇಲಾಕುಣಿ ಗ್ರಾಮದ ಮಠದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿವೇಕಾನಂದರ ವಾಣಿಗಳು ವಿಶ್ವವ್ಯಾಪಿಯಾಗಿವೆ ಅವರ ಸಂದೇಶಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಪ್ರಚಲಿತದಲ್ಲಿವೆ ಹೀಗಾಗಿ ಅವರನ್ನು ಬಿಡಿ ಬಿಡಿಯಾಗಿ ನೋಡದೇ ಈಡಿಯಾಗಿ ನೀಡುವ ಪ್ರವೃತ್ತಿ ಬೆಳಸಿಕೊಳ್ಳಬೇಕಿದೆ ಎಂದು ಹೇಳಿದರು.
ದೇಶದ ಏಕತೆ, ಸಮಗ್ರತೆಗಾಗಿ ದುಡಿದ ಮಹನೀಯರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು ಅವರ ವಿಚಾರಧಾರೆಗಳಲ್ಲಿ ರಾಷ್ಟ್ರೀಯತೆ ಬಲವಾಗಿ ಕಂಡು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ಪರಮೇಶ್ವರ ಮೋದಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಪಾಲಕರ ಜವಾಬ್ದಾರಿಯೂ ಅತಿಯಾದ ಮಹತ್ವದಿಂದ ಕೂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಸುಭಾಷ್ ಪಾಟೀಲ, ಸಿದ್ದಣ್ಣ ಪೂಜಾರಿ, ಬಸಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಖಜೂರೆ, ಭೀಮಾಶಂಕರ ಮೋದೆ, ಚಿದಾನಂದ ಸ್ವಾಮಿ ಸೇರಿದಂತೆ ಇತರರು ಇದ್ದರು.