ಸುರಪುರ: ತಾಲೂಕಿನ ಶೆಳ್ಳಗಿ ಬಳಿಯಲ್ಲಿನ ಕೃಷ್ಣಾ ನದಿಗೆ ಸಂಕ್ರಾಂತಿ ಅಂಗವಾಗಿ ಪುಣ್ಯಸ್ನಾನಕ್ಕೆ ಹೋಗಿದ್ದ ಮಹಿಳೆಯೊಬ್ಬಳು ಸಾವನಪ್ಪಿರುವ ಘಟನೆ ನಡೆದಿದೆ.ತಾಲೂಕಿನ ರುಕ್ಮಾಪುರ ಗ್ರಾಮದ ಕೊಟ್ರೆಪ್ಪ ಎಂಬುವವರ ಕುಟುಂಬಸ್ಥರು ಹಾಗು ಸಂಬಂಧಿಕರು ಸೇರಿ ೮ ಜನರು ಆಟೋ ಒಂದರಲ್ಲಿ ಶೆಳ್ಳಗಿ ಬಳಿಯಲ್ಲಿ ಹರಿಯುವ ಕೃಷ್ಣಾ ನದಿಗೆ ಪಣ್ಯಸ್ನಾನಕ್ಕೆಂದು ಹೋಗಿದ್ದರು.ಶನಿವಾರ ಬೆಳಿಗ್ಗೆ ೧೧ ಗಂಟೆಯ ವೇಳೆಗೆ ನದಿಗೆ ತೆರಳಿದ್ದಾರೆ.ಕೊಟ್ರೆಪ್ಪನವರ ಪತ್ನಿ ಕಾವೇರಿ ಎಂಬುವ ೩೫ ವರ್ಷದ ಮಹಿಳೆಯೆ ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಕಾವೇರಿ ಕೊಟ್ರಪ್ಪ ಹಾಗು ಅವರು ಇಬ್ಬರು ಮಕ್ಕಳು ಮತ್ತು ಅವರ ಸಂಬಂಧಿಕರು ಎಲ್ಲರು ನದಿಯಲ್ಲಿ ಸ್ನಾನ ಮಾಡುವಾಗ ದೇವಾಪುರ ಹಳ್ಳಕ್ಕೆ ಹಾವಿನಾಳ ಬಳಿಯಲ್ಲಿ ಕಿರು ವಿದ್ಯೂತ್ ಉತ್ಪಾದನಾ ಘಟಕಕ್ಕಾಗಿ ಚೆಕ್ ಡ್ಯಾಂ ನಿರ್ಮಿಸಿದ್ದು ಶನಿವಾರ ಈ ಚೆಕ್‌ಡ್ಯಾಂನ ಗೇಟ್‌ಗಳು ಎತ್ತಿದ ಕಾರಣದಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ.
ಇದೇ ಸಂದರ್ಭದಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಏಕಾಏಕಿ ನೀರು ಹೆಚ್ಚಾಗಿವೆ,ಇದರಿಂದ ಕಾವೇರಿ ಅವರ ಮಕ್ಕಳು ಮತ್ತು ಅವರ ಸಂಬಂಧಿಕರ ಮಗಳು ಬಾನುಪ್ರಿಯ ಎಂಬುವ ಮಗು ಅಪಾಯಕ್ಕೆ ಸಿಲುಕಬಹುದೆಂದು ಮಕ್ಕಳನ್ನು ಕರೆದುಕೊಂಡು ಬರಲು ಹೋದಾಗ ಮಕ್ಕಳನ್ನು ದಡಕ್ಕೆ ಕಳುಹಿಸುವಾಗ ನೀರು ಹೆಚ್ಚಾಗಿದ್ದರಿಂದ ಮೃತ ಮಹಿಳೆ ಕಾವೇರಿ ಕೊಚ್ಚಿಕೊಂಡು ಹೋಗಿದ್ದಾಳೆ.ಅಲ್ಲದೆ ಮಗಳು ಕೂಡ ನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದಳು ಆದರು ಅಲ್ಲಿಯೆ ಇದ್ದ ತಂದೆ ಕೊಟ್ರೆಪ್ಪ ಮಕ್ಕಳನ್ನು ದಡಕ್ಕೆ ಸೇರಿಸಿದ್ದಾರೆ,ಆದರೆ ಕೊಟ್ರೆಪ್ಪನವರ ತಂಗಿಯ ಮಗಳು ಬಾನುಪ್ರಿಯ ಅಸ್ವಸ್ಥಳಾಗಿದ್ದು ಕಲಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದೇ ಸಂದರ್ಭದಲ್ಲಿ ಅಲ್ಲಿಯೆ ಇದ್ದ ಕೆಲವರು ಮೃತ ಕಾವೇರಿಗಾಗಿ ಹುಡುಕಾಟ ನಡೆಸಿದ್ದರು.ಆದರೆ ಪತ್ತೆಯಾಗಿರಲಿಲ್ಲ,ನಂತರ ಅಗ್ನಿಶಾಮಕ ದಳ ಹಾಗು ಮೀನುಗಾರರು ಬಂದು ಹುಡುಕಾಟ ನಡೆಸಿದರು.ಈಗ ಕೊಟ್ರೆಪ್ಪನು ಅಸ್ವಸ್ಥನಾಗಿದ್ದು ಸುರಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನೀರಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಗಾಗಿ ಮದ್ಹ್ಯಾನದ ವರೆಗೂ ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಹಣಮಗೌಡ ಪೊಲೀಸ್ ಪಾಟೀಲ್ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳ ನೇತೃತ್ವದಲ್ಲಿ ಹುಡುಕಾಟವನ್ನು ನಡೆಸಲಾಗಿದ್ದು,ಜೊತೆಗೆ ಸ್ಥಳಿಯ ಮೀನುಗಾರರು ಕೂಡ ಹುಡುಕಾಟಕ್ಕೆ ನೆರವಾಗಿದ್ದರಿಂದ ಸಾಯಂಕಾಲದ ವೇಳೆಗೆ ಮಹಿಳೆಯ ಶವ ಪತ್ತೆಯಾಗಿದೆ.ಇದೇ ಸ್ಥಳದಲ್ಲಿ ಕಳೆದ ೨೦೧೩ ರಲ್ಲಿ ಇದೇ ರುಕ್ಮಾಪುರ ಗ್ರಾಮದ ವ್ಯಕ್ತಿ ಮಲ್ಲಿಕಾರ್ಜುನ ಎನ್ನುವವರು ನೀರಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು.
ಮೃತ ಕಾವೇರಿ ಪ್ರೇರಣಾ ಶಾಲೆಯಲ್ಲಿ ಖಾಸಗಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಕೊಟ್ರೆಪ್ಪ ಖಾಸಗಿ ಫರ್ಟಿಲೈಜರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.ಸಂಕ್ರಾಂತಿ ಅಂಗವಾಗಿ ಪುಣ್ಯಸ್ನಾನಕ್ಕೆ ಹೋಗಿದ್ದ ಕುಟುಂಬ ಇಂತಹ ದುರಂತಕ್ಕೀಡಾಗಿದ್ದು,ಕಾವೇರಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಪ್ರೇರಣಾ ಶಾಲೆಯ ಶಿಕ್ಷಕಿಯರು ಮತ್ತು ಸಿಬ್ಬಂದಿಗಳು ತಾಲೂಕು ಆಸ್ಪತ್ರೆ ಬಳಿ ಆಗಮಿಸಿದ್ದರು.ಈ ಸಂದರ್ಭದಲ್ಲಿ ಆಕ್ರಂದನ ಮುಗಿಲುಮುಟ್ಟಿತ್ತು.ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರಾವಾರ ಬೆಳ್ಳಂಬೆಳಿಗ್ಗೆ ಸುರಪುರ ತಾಲೂಕಿನ ಮಾವಿನಮಟ್ಟಿ,ಮಾಲಗತ್ತಿ,ಕರಡಕಲ್ ಹಾಗು ಹೂವಿನಳ್ಳಿಯ ಯುವಕರು ಸೇರಿ ೭ ಜನರು ಜಗಳೂರು ಬಳಿಯಲ್ಲಿನ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಮಾಸುವ ಮುನ್ನವೆ ಶನಿವಾರ ಮತ್ತೊಂದು ಘೋರ ದುರಂತ ಸಂಭವಿಸಿದ್ದರಿಂದ ತಾಲೂಕಿನ ಜನತೆ ಸಂಕ್ರಾಂತಿ ಹಬ್ಬದ ಕುರಿತು ಹಲವು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿದ್ದಾರೆ.ಅಲ್ಲದೆ ತಾಲೂಕು ಆಸ್ಪತ್ರೆಗೂ ಭೇಟಿ ನೀಡಿ ಘಟನೆಯ ಕುರಿತು ಶೋಕ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ,ಕಾಂಗ್ರೆಸ್ ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ವೆಂಕಟೇಶ ಬೇಟೆಗಾರ,ಶರಣು ನಾಯಕ ಕಲಬುರ್ಗಿ,ಶಿವರಾಯ ಕಾಡ್ಲೂರ,ಹಣಮಂತ್ರಾಯ ಮಕಾಶಿ,ಹಣಮೆಗೌಡ ರುಕ್ಮಾಪುರ ಸೇರಿದಂತೆ ಅನೇಕರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.