ಕಲಬುರಗಿ: ಪಿಎಸ್‌ಐ ನೇಮಕ ಅಕ್ರಮ ಪ್ರಕರಣ ಸಿಐಡಿಗೆ ಒದಗಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ಸರ್ಕಾರ ತನ್ನ ಧೋರಣೆಯನ್ನು ಸ್ಪಷ್ಟಪಡಿಸಬೇಕು ಎಂದು ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಶೈಕ್ಷಣಿಕವಾಗಿ ಮುಂದುವರಿಯಲು ಸಹ ಇಂತಹ ಅಕ್ರಮಗಳು ಅಡ್ಡಗಾಲಾಗುತ್ತಿದ್ದು, ತನಿಖಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ನಮ್ಮ ಭಾಗಕ್ಕೆ ಬಂದಿರುವ ಕಳಂಕವನ್ನು ದೂರ ಮಾಡಬೇಕು ಎಂದು ಗುರುವಾರ ಮಾಧ್ಯಮದವರಿಗೆ ತಿಳಿಸಿದರು.
ಇದನ್ನೂ ಓದಿ: ಸಿಐಡಿ ನೋಟಿಸಿಗೆ ಶಾಸಕ ಪ್ರಿಯಾಂಕ್ ಖರ್ಗೆ ನೀಡಿರುವ ಉತ್ತರ
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಎಲ್ಲವೂ ಅಯೋಮಯವಾಗಿದ್ದು, ಅಭಿವೃದ್ಧಿಯಂತೂ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಪ್ರಕರಣ ಹೊರಬಿದ್ದು ಹತ್ತೆಂಟು ದಿನಗಳಾದರೂ ಮುಖ್ಯ ಆರೋಪಿಗಳನ್ನು ಬಂಧಿಸದಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ ಇತರರಿದ್ದರು.