ಬುದ್ಧ, ಬಸವ, ಅಂಬೇಡ್ಕರ್‌ರು ಮಾನವ ಘನತೆಯ ದೀಪ. ಅಂತರಂಗದ ಎಚ್ಚರ. ಮಾನವೀಯತೆಯ ಮಹನದಿ. ನಮ್ಮವರ ನಡುವೆ ನಾವೇ ಹೋರಾಡಬೇಕಾದ ಸಮಾಜದ ದುರಂತಕ್ಕೆ ಭೀಮ ಬಾಣವೇ ಮದ್ದು. ಪ್ರಜಾಪ್ರಭುತ್ವ ಉಳಿಸುವ, ಸಂವಿಧಾನ ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. -ಡಾ. ಶಿವರಂಜನ ಸತ್ಯಂಪೇಟೆ, ಕಲಬುರಗಿ
ಬಸವಕಲ್ಯಾಣ (ಎಕಲಾಪುರ): ಮನುಷ್ಯನಿಗೆ ಅಧಿಕಾರ ಮುಖ್ಯವಲ್ಲ. ಅಧಿಕಾರ ಬರುತ್ತದೆ. ಹೋಗುತ್ತದೆ. ಆದರೆ ನಾವು ಮಾಡಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಈ ಮಾತಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು ಹಾಗೂ ಬರಹವೇ ಸಾಕ್ಷಿ ಎಂದು ಕಾಂಗ್ರೆಸ್ ಮುಖಂಡ ಬಾಬು ಹೊನ್ನಾನಾಯಕ ಹೇಳಿದರು.
ತಾಲ್ಲೂಕಿನ ಎಕಲೂರ ಗ್ರಾಮದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೧ನೇ ಜಯಂತಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಹೋದರೆ ದೇಶದ ಪ್ರಗತಿ ಸಾಧ್ಯ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೂಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದನ್ನೂ ಓದಿ: ‘ಬಸವ ರತ್ನ’ ಪ್ರಶಸ್ತಿಗೆ ತೇಗಲತಿಪ್ಪಿ, ಅಂಡಗಿ ಆಯ್ಕೆ
ಬಸವಣ್ಣ-ಅಂಬೇಡ್ಕರ್ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಲು ಈ ಮಹನೀಯರ ವಿಚಾರಗಳು ಸಮಕಾಲೀನ ಸಂದರ್ಭದ ವಿವೇಚನೆಗೆ ಅಗತ್ಯವಾದ ಅಸ್ತ್ರಗಳಾಗಿವೆ. ಭಾವಚಿತ್ರಗಳ ಮೆರವಣಿಗೆ ಮೂಲಕ ಅಬ್ಬರದ ಜಯಂತಿ ಆಚರಿಸುವುದಕ್ಕಿಂತ ಮಹಾಮಾನವತಾವದಿಗಳ ವಿಚಾರಗಳ ಮೆರವಣಿಗೆ ಆಗಬೇಕಿದೆ. ಅಂದಾಗ ಮಾತ್ರ ನಾವು ಆಚರಿಸುವ ಜಯಂತಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಎಕಲೂರ ಗ್ರಾಪಂ ಅಧ್ಯಕ್ಷ ಸಂತೋಷ ಬಾಬು ಹೊನ್ನಾನಾಯಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ವಿಠ್ಠಲ ಚಿಕಣಿ, ದೇವೇಂದ್ರಪ್ಪ ಕಟ್ಟಿಮನಿ, ಡಾ. ಜಯಕುಮಾರ, ಶರಣಬಸಪ್ಪ ನಾಟೀಕಾರ ಮಾತನಡಿದರು. ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಗಣಪತಿ ನೀಲೆ, ಪಿಡಿಒ ಸುನಿಲಕುಮಾರ, ಗ್ರಾ.ಪ. ಸದಸ್ಯ ತುಳಸಿರಾಮ ಸಿದ್ರಾಮ ಕಾಂಬಳೆ, ವಿಠ್ಠಲ್, ಬಸವರಾಜ ಮಾಲಿಪಾಟೀಲ, ಭೀಮಾಶಂಕರ ರಾಜೇಂದ್ರಕುಮಾರ, ಮಹಾದೇವ ಸಿಂಧೆ, ದಶರಥ ಮಾಳಗೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ಅಂಬೇಡ್ಕರ್ ಕುರಿತು ಶಾಲಾ ಮಕ್ಕಳು ಮಾಡಿದ ಇಂಗ್ಲಿಷ್ ಭಾಷಣ ಗಮನ ಸೆಳೆದವು.
ಇದನ್ನೂ ಓದಿ: ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ ಹೋರಾಟ: ಪ್ರಿಯಾಂಕ್ ಖರ್ಗೆ