ಕಲಬುರಗಿ: ರಾಕೇಶ್ ಟಿಕಾಯತ್ ಮತ್ತು ಇತರ ರೈತ ನಾಯಕರ ಮೇಲೆ ಬಿಜೆಪಿ ಗೂಂಡಾಗಳು ನಡೆಸಿದ ಧಾಳಿಯನ್ನು ಮತ್ತು ಮಸಿ ಬಳಿದಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಖಂಡಿಸಿ ಧಾಳಿಕೋರರ ಮೇಲೆ ಶಿಕ್ಷೆಯಾಗುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಏಕಾಏಕಿ ವೇದಿಕೆಗೆ ನುಗ್ಗಿ ರಾಕೇಶ ಅವರ ಮೇಲೆ ಹಲ್ಲೆ ಮಾಡಿ ಮಸಿ ಬಳಿಯಲಾಗಿದ್ದು, ಈ ಧಾಳಿಯು ವ್ಯಕ್ತಿಗಳ ಮೇಲೆ ನಡೆಸಿದ್ದಲ್ಲ ಬದಲಿಗೆ ಭಾರತದ ಹೋರಾಟಗಳ ಮೇಲೆ ನಡೆಸಿದ ಧಾಳಿಯಾಗಿದೆ ಎಂದು ನೀಲಾ ಟೀಕಿಸಿದ್ದಾರೆ.
ಗುಜರಾತ್ ಮಾದರಿಯಲ್ಲಿ ಕರ್ನಾಟಕವನ್ನು ಕೋಮುದಂಗೆಗೆ ಪ್ರಯೋಗಾಲಯವಾಗಿ ಮಾಡುತ್ತಿದೆ ಆರ್ ಎಸ್ ಎಸ್ ಮತ್ತು ಬಿಜೆಪಿ. ಇಂತಹ ಫ್ಯಾಸಿಸ್ಟ್ ನಡೆಗಳ ಹಿಂದೆ ಬಿಜೆಪಿ ಸರಕಾದ ಮತ್ತು ಅರ್ ಎಸ್ ಎಸ್ ನ ಹಿಡನ್ ಅಜೆಂಡಾ ಅಡಗಿದೆ. ದಿನ ನಿತ್ಯ ಕರ್ನಾಟಕವು ಇಂತಹ ವಿಧ್ವಂಸಕ ಕೃತ್ಯದಿಂದ ನರಳುತ್ತಿದೆ. ಸರಕಾರ ಮಾತ್ರ ಕೈ ಕಟ್ಟಿಕೊಂಡು ಕುಳಿತು ಮೌನ ಸಮ್ಮತಿ ಕೊಡುತಿದೆ. ರಾಜ್ಯದಲ್ಲಿ ಇಂತಹ ಅರಾಜಕತೆ ಸೃಷ್ಟಿಗೆ ಸರಕಾರ ಹೊಣೆಯಾಗಿದೆ. ಬಿಜೆಪಿಗೆ ಸರಕಾರ ನಡೆಸುವ ಯಾವ ಯೋಗ್ಯತೆಯೂ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿದ್ದಾರೆ.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಂತೂ ಆರ್ ಎಸ್ ಎಸ್ ಅಜೆಂಡಾ ಜಾರಿ ಮಾಡುವ ವಕ್ತಾರರಂತಾಗಿದ್ದಾರೆ. ಆದ್ದರಿಂದಲೇ ಪ್ರಜಾಪ್ರಭುತ್ವೀಯ ಮೌಲ್ಯಗಳನ್ನೇ ನಾಶ ಮಾಡುವ ಚಟುವಟಿಕೆಗೆ ಬೆಂಬಲವಾಗಿದ್ದಾರೆ. ಕೂಡಲೇ ಧಾಳಿಕೋರರ ಮೇಲೆ ಶಿಕ್ಷೆಯಾಗುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.