ಕಲಬುರಗಿ: ಕೃಷಿ, ಉದ್ಯಮ, ಜೀವನೋಪಾಯ ಹಾಗೂ ಶೈಕ್ಷಣಿಕ ವಲಯದಲ್ಲಿ ಕೇಂದ್ರ ಪುರಸ್ಕೃತ ೧೩ ಯೋಜನೆಗಳಿಗೆ ಬ್ಯಾಂಕ್ ಸಾಲ ಪಡೆಯಲು ಜನಸಮರ್ಥ ಆನ್‌ಲೈನ್ ಪೋರ್ಟಲ್ ಒಂದು ವೇದಿಕೆಯ ಡಿಜಿಟಲ್ ವ್ಯವಸ್ಥೆಗೆ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.
ಬುಧವಾರ ಕಲಬುರಗಿ ಎಸ್.ಬಿ.ಐ ಲೀಡ್ ಬ್ಯಾಂಕ್ ಕಚೇರಿಯಿಂದ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಸಭಾಂಗಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಸಮರ್ಥ ಪೋರ್ಟಲ್ ವ್ಯವಸ್ಥೆ ಜಾರಿಯಾದ ಪರಿಣಾಮ ಸಾಲ ಬಯಸುವವರು ಬ್ಯಾಂಕಿಗೆ ಹೋಗಬೇಕಿಲ್ಲ. ಆನ್‌ಲೈನ್ ಮೂಲಕ ತಾವು ಆಯ್ಕೆ ಮಾಡಿಕೊಂಡ ಬ್ಯಾಂಕಿಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಗತಿ ಆನ್‌ನಲ್ಲಿಯೇ ನೋಡಬಹುದು. ಜೊತೆಗೆ ಸಾಲ ಮಂಜೂರಾತಿ ಸಹ ಆನ್‌ಲೈನ್‌ನಲ್ಲಿಯೆ ನಡೆಯಲಿದೆ. ಹೀಗಾಗಿ ಇನ್ನು ಮುಂದೆ ಸಾಲಕ್ಕೆ ಬ್ಯಾಂಕ್ ಸುತ್ತಾಟ ಬೇಕಿಲ್ಲ ಎಂದರು.
ಇದನ್ನೂ ಓದಿ: ರೈತರು ಇ-ಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನ
ಹಿಂದೆಲ್ಲ ಸಾಲಕ್ಕೆ ಜನರು ಬ್ಯಾಂಕ್ ಕಡೆ ಮುಖ ಮಾಡಬೇಕಿತ್ತು, ಇದೀಗ ಬದಲಾಗಿದೆ. ಬ್ಯಾಂಕ್‌ಗಳು ಜನರ ಹತ್ತಿರ ಹೋಗಬೇಕಿದೆ. ಬ್ಯಾಂಕಿಗೆ ಬರುವ ಗ್ರಾಹಕರಿಗೆ ಸೌಜನ್ಯದಿಂದ ಮಾತಾಡಿಸಬೇಕು. ಅನಗತ್ಯ ದಾಖಲೆಗಳು, ಸೆಕ್ಯೂರಿಟಿ ಕೇಳಿ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಬಾರದು. ಇಲ್ಲಿ ನೀರಿದೆ, ಉದ್ಯಮ ಸ್ಥಾಪಿಸಲು ಉದ್ಯಮಿಗಳು ಇದ್ದಾರೆ. ಅವರಿಗೆ ಹಣಕಾಸಿನ ವ್ಯವಸ್ಥೆ ಕಲ್ಪಿಸುವುದು ಬ್ಯಾಂಕ್ ಕರ್ತವ್ಯ ಎಂದರು.
ತಲಾ ಆದಾಯ ವೃದ್ಧಿಗೆ ಒತ್ತು ಕೊಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಆದರೂ ಕಲಬುರಗಿ ಜಿಲ್ಲೆಯ ಪ್ರತಿ ವ್ಯಕ್ತಿಗಳ ತಲಾ ಆದಾಯ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಬೇಸರದಿಂದ ನುಡಿದ ಸಂಸದ ಡಾ.ಉಮೇಶ ಜಾಧವ ಅವರು ಇದನ್ನು ವೃದ್ಧಿಸಲು ಉದ್ಯೋಗ ಸೃಜನೆಗೆ ಹೆಚ್ಚಿನ ಒತ್ತು ನೀಡಬೇಕು. ಸ್ವ-ಸಹಾಯ ಗುಂಪು, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹಾಗೂ ಸಮರ್ಥ ಉದ್ಯಮಿಗಳಿಗೆ ಸಾಲ ನೀಡಬೇಕು. ಇಲ್ಲಿನ ಜನರ ಜೀವನಮಟ್ಟ ಸುಧಾರಿಸಬೇಕು ಎಂದು ಬ್ಯಾಂಕರ‍್ಸ್‌ಗಳಿಗೆ ಸೂಚಿಸಿದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಬಾಲರಾಜ ಗುತ್ತೇದಾರ
ಡಿ.ಸಿ. ಯಶವಂತ ವಿ. ಗುರುಕರ್ ಮಾತನಾಡಿ, ನವ ಭಾರತ ನಿರ್ಮಾಣದಲ್ಲಿ ಬ್ಯಾಂಕರ‍್ಸ್ ಪಾತ್ರ ಮಹತ್ತರವಾಗಿದ್ದು, ಇದನ್ನು ಅರಿತು ಬ್ಯಾಂಕ್ ಅಧಿಕರಿಗಳು ಕಾರ್ಯನಿರ್ವಹಿಸಬೇಕು. ಬ್ಯಾಂಕಿನಲ್ಲಿ ದೊಡ್ಡವರಿಗೆ ಬೇಗ ಸಾಲ ಮಂಜೂರಾಗುತ್ತೆ, ಆದರೆ ಬಡ ಜನರು ಸುತ್ತಾಡಬೇಕಾಗುತ್ತದೆ. ಇದು ಬದಲಾಗಬೇಕಿದೆ. ರಾಜ್ಯ ಸರ್ಕಾರ ೭ ಲಕ್ಷ ರೂ. ಮೊತ್ತದ ಟ್ಯಾಕ್ಸಿಗಳಂತಹ ಯೋಜನೆಗಳಿಗೆ ೩ ಲಕ್ಷ ಸಬ್ಸಿಡಿ ನೀಡಿದರು, ಬ್ಯಾಂಕ್‌ಗಳು ಉಳಿದ ೪ ಲಕ್ಷ ರೂ. ಸಾಲ ನೀಡುತ್ತಿಲ್ಲ. ಸಾಲ ಪಡೆಯಲು ಕ್ವಾಲೆಟರಲ್ ಸೆಕ್ಯೂರಿಟಿ ಕೇಳುತ್ತಿದ್ದಾರೆ. ಸಾಲ ಮಂಜೂರಾತಿಗೆ ಇದರ ಅವಶ್ಯಕತೆವಿಲ್ಲ. ಒಬ್ಬ ಗ್ರಾಹಕನಿಗೆ ಸಾಲ ನೀಡಿದರೆ ಬ್ಯಾಂಕಿಗೆ ಅದು ದಾಖಲೆಯ ಅಂಕಿ-ಸಂಖ್ಯೆ, ಸಾಲ ಪಡೆದ ವ್ಯಕ್ತಿಗೆ ಅದು ಜೀವನದ ಪ್ರಶ್ನೆಯಾಗಿರುತ್ತದೆ ಎಂದರು.
ಸಾಲದ ಚೆಕ್‌ಗಳು ಹಸ್ತಾಂತರ: ಇದೆ ಸಂದರ್ಭದಲ್ಲಿ ವಿವಿಧ ಬ್ಯಾಂಕ್‌ಗಳಿಂದ ಪಿ.ಎಂ.ಇ.ಜಿ.ಪಿ, ಮುದ್ರಾ, ಎಸ್.ಹೆಚ್.ಜಿ. ಜೀವನೋಪಾಯ, ಹೋಮ್ ಲೋನ್ಸ್, ಸ್ಟ್ಯಾಂಡಪ್ ಇಂಡಿಯಾ, ಶೈಕ್ಷಣಿಕ ಸಾಲ ಯೋಜನೆಯಡಿ ಹತ್ತಾರು ಫಲಾನುಭವಿಗಳಿಗೆ ಸಂಸದ ಡಾ.ಉಮೆರಶ ಜಾಧವ ಅವರು ಸಾಲದ ಚೆಕ್ ಹಸ್ತಾಂತರಿಸಿದರು. ಇದಲ್ಲದೆ ಪಿ.ಎಂ.ಜೆ.ಜೆ.ವೈ, ಪಿ.ಎಂ.ಎಸ್.ವೈ ಯೋಜನೆಯಡಿ ವಾರ್ಷಿಕ ೧೨ ರೂ., ೩೩೦ ರೂ. ಕಂತಿನ ವಿಮೆ ಮಾಡಿಸಿ ಅಪಘಾತ ಹಾಗೂ ಸ್ವಭಾವಿಕ ಮರಣ ಹೊಂದಿದ ವ್ಯಕ್ತಿಯ ಅವಲಂಭಿತರಿಗೆ ೨ ಲಕ್ಷ ರೂ. ಗಳ ಪರಿಹಾರ ಧನ ಸಹ ನೀಡಲಾಯಿತು.
ಇದನ್ನೂ ಓದಿ: ಯುವಕರು ಬಿಜೆಪಿ ಕಾಂಗ್ರೆಸ್ ಬಿಟ್ಟು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಗಿರೀಶ್ ಡಿ. ಬದೋಲೆ, ಎಸ್.ಬಿ.ಐ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಲ್.ಶ್ರೀನಿವಾಸ ರಾವ್, ಎಸ್.ಬಿ.ಐ ಪ್ರಾದೇಶಿಕ ವ್ಯವಸ್ಥಾಪಕ ಸುಮಾ ಹೆಚ್.,ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಶ್ರೀನಿವಾಸ ಧಂಗಾಪೂರ, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸಂಜೀವಪ್ಪ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಸ್ಥಾಪಕ ಅರವಿಂದ ಹೆಗಡೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಲ್ಲಿಕಾರ್ಜುನ ಎಂ. ಹಾಗೂ ಇನ್ನಿತರರ ಬ್ಯಾಂಕ್ ಅಧಿಕಾರಿಗಳು ಇದ್ದರು. ಸಾಲ ಸಂಪರ್ಕ ಕಾರ್ಯಕ್ರಮದ ಅಂಗವಾಗಿ ವಿವಿಧ ಬ್ಯಾಂಕ್‌ಗಳು ಸ್ಟಾಲ್ ಹಾಕಿ ಗ್ರಾಹಕರಿಗೆ ಸಾಲ ಪಡೆಯುವ ಮತ್ತು ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿ ವಾಪಸ್ ಪ್ರಶ್ನೆಯೇ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ