- ಜೆಡಿಎಸ್ ಪಕ್ಷಕ್ಕೆ ಕ್ರಾಸ್ ವೋಟಿಂಗ್ ಭಯವಿಲ್ಲ
- ಮತ ಕೇಳಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯಗೆ ನಾಚಿಕೆ ಆಗೋದಿಲ್ಲವೇ ಎಂದು ಕಿಡಿ
- ನುಡಿಮುತ್ತುಗಳ ಮಾತೆತ್ತಿದ ಡಿಕೆಶಿ ಮೇಲೆ ಟೀಕಾ ಪ್ರಹಾರ
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲು ಸಾಧ್ಯವೇ ಇಲ್ಲ. ನಮಗೆ ಕ್ರಾಸ್ ವೋಟಿಂಗ್ ಆತಂಕವೂ ಇಲ್ಲ, ಭಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅಲೆಮಾರಿ, ಅರೆ ಅಲೆಮಾರಿ ಜನರು ಸ್ವಾಭಿಮಾನದಿಂದ ಬದುಕಬೇಕು: ಕೆ.ರವೀಂದ್ರ ಶೆಟ್ಟಿ
ಅಲ್ಲದೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ ನೀಡುವಂತೆ ಕೋರಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿರುವುದು ನಾಚಿಕೆಗೇಡು ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಅವರು ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್ ಪಕ್ಷದ ಎರಡೂ ಕಣ್ಣು ಹೋಗಲಿ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ಕೇವಲ ಬಿಜೆಪಿ ಗೆಲ್ಲಲು ಅನುಕೂಲ ಮಾಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆ ಬಂದ ಮೇಲೆ ಬಿಜೆಪಿ ಬಿ ಟೀಮ್ ಯಾವುದು ಎನ್ನುವುದು ಅರ್ಥ ಆಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಮ್ಮ ಪಕ್ಷದ 32 ಶಾಸಕರು ನಮ್ಮ ಜತೆಯಲ್ಲೇ ಇದ್ದಾರೆ. ಮುಂದಿನ ಚುನಾವಣೆ ಬರುವವರೆಗೆ ನಮ್ಮ ಶಾಸಕರು ನಮ್ಮ ಜತೆಯೇ ಇರುತ್ತೇವೆಂದು ಹೇಳಿದ್ದಾರೆ. ಬೇರೆ ಪಕ್ಷದವರು ನನ್ನ ಸಂಪರ್ಕದಲ್ಲಿ ಯಾರು ಇಲ್ಲ. ನನ್ನ ಆತ್ಮೀಯರಾದ ಕೆಲ ಕಾಂಗ್ರೆಸ್ ಶಾಸಕರಿಗೆ ನಮಗೆ ಎರಡನೇ ಪ್ರಾಶಸ್ತ್ಯದ ಮತ ನೀಡಲು ಮನವಿ ಮಾಡಿದ್ದೇನೆ ಎಂದರು.
ಇದನ್ನೂ ಓದಿ: ರೈತರ ಗಮನಕ್ಕೆ: ಪಿ.ಎಮ್. ಕಿಸಾನ್ ಯೋಜನೆ ಇ-ಕೆವೈಸಿಗೆ 31 ರವರೆಗೆ ಗಡುವು
ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಜತೆ ನಾನು ದೂರವಾಣಿಯಲ್ಲಿ ಮಾತಾಡಿದ್ದು ಸತ್ಯ. ಜೆಡಿಎಸ್ ಎರಡನೇ ಪ್ರಾಶಸ್ತ್ಯ ಮತ ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿ ಎಂದು ಮನವಿ ಮಾಡಿಕೊಂಡರು. ನಾವು ಎರಡನೇ ಪ್ರಾಶಸ್ತ್ರ ಮತ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲ. ಹೀಗಾಗಿ ನಮ್ಮ ಅಭ್ಯರ್ಥಿಗೆ ನಿಮ್ಮ ಎರಡನೇ ಪ್ರಾಶಸ್ತ್ರ ಮತ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಅವರು ಏನು ಮಾಡ್ತಾರೆ ನೋಡೊಣ ಎಂದರು ಮಾಜಿ ಮುಖ್ಯಮಂತ್ರಿಗಳು.
ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರಿಗೆ ಬರೆದ ಪತ್ರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕುವಂತೆ ಜೆಡಿಎಸ್ ಶಾಸಕರಿಗೆ ಪತ್ರ ಬರೆದ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕು. ನಮ್ಮ ಪಕ್ಷದ ಶಾಸಕರಿಗೆ ಹೇಗೆ ಪತ್ರ ಬರೆಯುತ್ತಾರೆ ಅವರು. ಒಂದು ಕಡೆ ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಟೀಕೆ ಮಾಡಿತ್ತಾರೆ. ಇನ್ನೊಂದು ಕಡೆ ನಮ್ಮದೇ ಶಾಸಕರಿಗೆ ಪತ್ರ ಬರೆದು ಮತ ಕೇಳುತ್ತಾರೆ. ಅವರಿಗೆ ಕೊಂಚವಾದರೂ ನಾಚಿಕೆ ಬೇಡವೇ ಎಂದು ಕಿಡಕಾರಿದರು.
ಇದನ್ನೂ ಓದಿ: ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಟವೆಲ್ ಹಾಕಿದ್ದರು. ಆತ್ಮಸಾಕ್ಷಿ ಇದ್ದರೆ ಸತ್ಯ ಹೇಳಲಿ ಈಗ. ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಅಧಿಕಾರ ಸಿಗಲ್ಲ ಎಂದು ಬಿಜೆಪಿ ಸೇರುವುದಕ್ಕೆ ಎಲ್.ಕೆ.ಅಡ್ವಾಣಿ ಅವರೊಂದಿಗೆ ಚೌಕಾಸಿ ಮಾಡಿದ್ದರು. ಅದು ಸುಳ್ಳು ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
2009ರಲ್ಲೇ ಸಿದ್ದರಾಮಯ್ಯ ಆ್ಯಂಡ್ ಟೀಂ ಬಿಜೆಪಿ ಸೇರಲು ಪ್ರಯತ್ನ ಮಾಡಿದ್ದರು. ಎಲ‌್ .ಕೆ. ಅಡ್ವಾಣಿ ಬಳಿ ಚರ್ಚೆ ಮಾಡಿದ್ದರು. ಇದು ಗೊತ್ತಿಲ್ವಾ ಸಿದ್ದರಾಮಯ್ಯನವರೇ? ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವತ್ತು ಸಿದ್ದರಾಮಯ್ಯ ಹೋಗಿದ್ದರು ಎಂದು ಅವರು ಹೇಳಿದರು. ಮೈತ್ರಿ ಸರ್ಕಾರದಲ್ಲಿ ಇವರೆಲ್ಲ ಏನೇನೂ ಅಟ ಆಡಿದರು ಎಂಬುದು ಗೊತ್ತಿದೆ. ನಿಮಗೆ ಬೇಕಾದ ಖಾತೆಗಳು, ನಿಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡು ಮೆರೆದರು ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
ಸಾಕಷ್ಟು ಒತ್ತಡ ಇದ್ದರೂ ರೈತರ ಸಾಲ ಮನ್ನಾ ಮಾಡಲು ನಾನು ಸುಮ್ಮನೆ ಇದ್ದೆ. ಎಲ್ಲವನ್ನೂ ಸಹಿಸಿಕೊಂಡಿದ್ದೆ. ನನ್ನ ಸರಕಾರವನ್ನು ತೆಗೆದು ಇಂಥ ಸರಕಾರ ಬರಲು ಕಾರಣ ಯಾರು? ಸಿದ್ದರಾಮಯ್ಯನವರೇ ಬಿಜೆಪಿ ಸರಕಾರ ಬರಲು ಕಾರಣರು. ಈಗ ನೋಡಿದರೆ ಪಠ್ಯದ ಬಗ್ಗೆ ಈಗ ಧರಣಿ ಕೂತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುಕಿದರು.
ಇದನ್ನೂ ಓದಿ: ರೈತರ ಗಮನಕ್ಕೆ: ಪಿ.ಎಮ್. ಕಿಸಾನ್ ಯೋಜನೆ ಇ-ಕೆವೈಸಿಗೆ 31 ರವರೆಗೆ ಗಡುವು
ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎನ್ನುತ್ತಿದ್ದ ವ್ಯಕ್ತಿ ಇದೀಗ ಅದೇ ಪಕ್ಷದ ಶಾಸಕರ ಮತ ಕೇಳುತ್ತಿದ್ದಾರೆ. ಈಗ ಜೆಡಿಎಸ್ ಜಾತ್ಯತೀತ ಪಕ್ಷವಾಯಿತಾ? ಈಗ ಜೆಡಿಎಸ್ ಶಾಸಕರ ಸಂಪರ್ಕ ಬೇಕು, ಮತ ಬೇಕು. 2016ರಲ್ಲಿ ನಮ್ಮ ಶಾಸಕರನ್ನು ಹೈಜಾಕ್ ಮಾಡಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸಿದ್ದರು. ಇದೇನಾ ನಿನ್ನ ಜಾತ್ಯತೀತ ಸಿದ್ದಾಂತ ಸಿದ್ದರಾಮಯ್ಯನವರೆ? ಡಿ.ಕೆ. ಶಿವಕುಮಾರ್ ಅವರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನೀವು ಎಷ್ಟು ಬಾರಿ ಜೆಡಿಎಸ್ ಗೆ ಬೆಂಬಲ ಕೊಟ್ಟಿದ್ದೀರಿ. ಧರ್ಮಸಿಂಗ್ ಸಿಎಂ ಆಗಿದ್ದು ಯಾರ ಬೆಂಬಲದಿಂದ? ದೇವೆಗೌಡರು ಪ್ರಧಾನಿ ಆಗಿದ್ದು ಎಲ್ಲ ಮಿತ್ರಪಕ್ಷಗಳ ಬೆಂಬಲದಿಂದ. ಆಗ ನೀವು ಎಲ್ಲಿದ್ದೀರಿ ಸಿದ್ದರಾಮಯ್ಯನವರೇ? ಬೇರೆಯವರ ಬಳಿ ನಿಮ್ಮ ಆಟ ಆಡಿ, ನನ್ನ ಹತ್ತಿರ ಅಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು ಮಾಜಿ ಮುಖ್ಯಮಂತ್ರಿಗಳು.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ಸಿನವರಾ? ಹಲವು ಮಿತ್ರ ಪಕ್ಷಗಳು ಸೇರಿ ದೇವೇಗೌಡರನ್ನು ಪ್ರಧಾನಿ ಮಾಡಿದ್ದವು. ಕಾಂಗ್ರೆಸ್ ನಡೆ ಬಗ್ಗೆ ಈಗಲೂ ನಾನು ಬಹಿರಂಗ ಚರ್ಚೆಗೆ ಸಿದ್ಧ. ಚುನಾವಣೆ ನಂತರ ಯಾಕೆ ಈಗಲೇ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಬಸವರಾಜ ಹೊರಟ್ಟಿಯವರೇ ಮತ್ತೆ ಮತ್ತೇ ಪಶ್ಚಿಮ ಶಿಕ್ಷಕರ ಕ್ಷೇತ್ರದ ಗೆಲ್ಲುವ ಅಭ್ಯರ್ಥಿ
ಕಾಂಗ್ರೆಸ್ ಪಕ್ಷದಲ್ಲಿ ನಾಮಾಕವಸ್ತೆಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರ ಮಾತು ಏನು ನಡೆಯಲ್ಲ. ಕಾಂಗ್ರೆಸ್ ಹೈಕಮಾಂಡ್ ಮಾತು ಕೂಡ ನಡೆಯಲ್ಲ. ಇಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಒಬ್ಬರೇ ಇದ್ದಾರೆ. ಅವರ ಮಾತೇ ಇಲ್ಲಿ ನಡೆಯುವುದು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕಳೆದ ಮೂರ್ನಾಲ್ಕು ದಿನದ ಹಿಂದೆ ಕಾಂಗ್ರೆಸ್ ನಾಯಕರಿಗೆ ಹೊಸ ಅಧ್ಯಾಯ ಬರೆಯುವ ಪ್ರಾಮಾಣಿಕತೆ ಇದ್ದರೆ ಚರ್ಚೆಗೆ ಸಿದ್ದ ಅಂದಿದ್ದೇನೆ. ಅದು ನಮ್ಮ ವೀಕ್ ನೆಸ್ ಅಂತ ಭಾವನೆ ಬೇಡ ಎಂದರು.
ರಾಜ್ಯಸಭೆಯ ಚುನಾವಣಾ ದಿನಾಂಕ ಘೋಷಣೆ ಆದ ದಿನದಿಂದಲೂ ಎಲ್ಲರ ಹೇಳಿಕೆ ಗಮನಿಸಿದ್ದೇನೆ. ಕಾಂಗ್ರೆಸ್ ನಾಯಕರು ಹೇಳ್ತಾರೆ ಅಭ್ಯರ್ಥಿ ಮೊದಲು ನಾವು ಹಾಕಿದ್ದೇವೆ ಬೆಂಬಲ ನೀಡಿ ಎಂದಿದ್ದಾರೆ. ಆದರೆ ಅದಕ್ಕೂ ಮೊದಲು ಸೋನಿಯಾ ಗಾಂಧಿ ಅವರ ಜೊತೆ ಹೆಚ್.ಡಿ.ದೇವೇಗೌಡರು ಮನವಿ ಮಾಡಿದ್ದರು. ನಾವು ಮೊದಲು ಅಭ್ಯರ್ಥಿ ಹಾಕಿದ್ದೇವೆ ಅಂತ ತೀರ್ಮಾನ ಮಾಡಿದ್ರೆ ಹೇಗೆ? ಎಂದು ಅವರು ಪ್ರಶ್ನಿಸಿದರು.
ನಾವು ಮೊದಲು ಹಾಕಿ ನೀವು ಬೆಂಬಲ ಕೊಡಿ ಅಂದರೆ ಹೇಗೆ? ಅದಕ್ಕೂ ಮುನ್ನ ನಮ್ಮ ನಾಯಕರ ಜತೆಗೆ ಯಾರಾದರೂ ಚರ್ಚೆ ಮಾಡಿದರಾ? ನಾವೇನು ನಿಮ್ಮ ಅಡಿಯಾಳುಗಳಾ? ಎಂದು ಕುಮಾರಸ್ವಾಮಿ ಗುಡುಗಿದರು. ನಮ್ಮ ನುಡಿಮುತ್ತುಗಳ ಮೂಲಕವೇ ಮನಸ್ಸು ಗೆಲ್ಲುವ ಪ್ರಯತ್ನ ಪಟ್ಟೆ. ಇದನ್ನು ಶಿವಕುಮಾರ್ ಅವರಿಗೆ ಹೇಳ್ತೀನಿ. ಅನ್ ಕಂಡೀಷನ್ ನಲ್ಲಿ ಸಿಎಂ ಮಾಡಲಿಲ್ವಾ ಅಂತರಲ್ಲಾ, ನಾನು ಅವರಿಗೆ ಕೇಳ್ತೀನಿ, ಬಂದಿದ್ದು ನಿಮ್ಮಿಂದ. ಬಿಜೆಪಿಯಿಂದಲೂ ಆಗ ಸಿಎಂ ಆಗಲು ಆಫರ್ ಇತ್ತು. ಬಿಜೆಪಿ ಬಿ ಟೀಂ ಅಂತ ಹೇಳಿ ಸಮಾಜದ ಮತ ತೆಗೆಯಲು ಶತಪ್ರಯತ್ನ ಮಾಡಿದಿರಿ. ನಮ್ಮ ಕದ ತಟ್ಟಿದ್ದು ನೀವು. ದೇವೇಗೌಡರು ಒಪ್ಪಿಗೆ ಕೊಟ್ಟರು. ಕೋಮುಶಕ್ತಿ ಉದ್ಭವ ಆಗೋದು ಬೇಡ ಅಂತ. ನೀವೇ ಸಿಎಂ ಆಗಿ ಅಂತ ದೇವೇಗೌಡರು ಹೇಳಿದರು. ಎಷ್ಟು ಬಾರಿ ಹೇಳಲಿ ಎಂದರು.
ಇದನ್ನೂ ಓದಿ: ಊಟ ಬೇಡಿದ ತಪ್ಪಿಗೆ ಮಗಳ ಬೆರಳಿಗೆ ಬರೆಯಿಟ್ಟಳು ಮಲತಾಯಿ!
ಕಾಂಗ್ರೆಸ್ ಪಕ್ಷಕ್ಕೆ 2023ಕ್ಕೆ ಕೊನೆ ಮೊಳೆ ಹೊಡೆದು ಸಿದ್ದರಾಮಯ್ಯ ಹೋಗ್ತಾರೆ ಎಂದ ಹೆಚ್ ಡಿಕೆ, ನಿನ್ನೆ ರಾತ್ರಿ ನಾನು ಡಿ.ಕೆ. ಶಿವಕುಮಾರ್ ಜತೆ ದೂರವಾಣಿಯಲ್ಲಿ ಮಾತಾಡಿದ್ದು ಸತ್ಯ. ಇದರಲ್ಲಿ ಕದ್ದು ಮುಚ್ಚಿ ಇಡೋದು ಏನಿದೆ? ಎಂದು ಪ್ರಶ್ನಿಸಿದರು.
ಜೆಡಿಎಸ್ ಅಸಮಾಧಾನ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಶಿವಲಿಂಗೇಗೌಡರಿಗೆ ನಾನೇ ಮಾತಾಡಿದ್ದೇನೆ. ಇನ್ನು ಜಿ.ಟಿ.ದೇವೇಗೌಡರು ಮತ ಹಾಕುವುದಾಗಿ ಹೇಳಿದ್ದಾರೆ. ಗುಬ್ಬಿ ಶ್ರೀನಿವಾಸ್ ಅವರನ್ನು ಸಂಪರ್ಕ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಸಭೆ ಉಸ್ತುವಾರಿ ಕಿಶನ್ ರೆಡ್ಡಿ ಅವರನ್ನು ನೀವು ಭೇಟಿಯಾದಿರಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನ್ಯಾಕೆ ಭೇಟಿ ಮಾಡಲಿ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗಾಯಾಳು ಯೋಧನ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸಿ: ವಡಗಾಂವ