ವಾಡಿ : ಅಮ್ಮ ಹಸಿವಾಗಿದೆ ಊಟ ಕೊಡು ಎಂದಿತು ಮಗು. ಊಟ ಬೇಕಾ ನಿನಗೆ ಕೊಡ್ತೀನಿ ಬಾ ಎಂದು ಹತ್ತಿರ ಕರೆದ ಮಲತಾಯಿ, ಅನ್ನದ ತಟ್ಟೆ ಕೈಗಿಡುವ ಬದಲು ಒಲೆಯ ಬೆಂಕಿ ಕೊಳ್ಳಿ ಕೈ ಬೆರಳುಗಳಿಗೆ ಹಚ್ಚಿ ಬರೆಯಿಟ್ಟಳು ಹೆಮ್ಮಾರಿ. ಸುಟ್ಟ ಗಾಯದಿ ಸಂಕಟಪಟ್ಟ ಮಗು ಪಕ್ಕದ ಮನೆಯವರಲ್ಲಿ ಆಸರೆ ಪಡೆದು ಅಡಗಿಕೊಂಡು ರೋಧಿಸಿತು ಹಸುಗೂಸು. ಅತ್ತೂ ಅತ್ತು ಕಣ್ಣೀರಾದರೂ ಕನಿಕರ ಪಡದೆ ಬೆನ್ನಟ್ಟಿ ಬಂದ ಮಲತಾಯಿ ಎಂಬ ಮಾಯೆ ಮನೆಗೆ ತಂದು ಮತ್ತಷ್ಟು ಕ್ರೌರ್ಯ ಮೆರೆದಳು. ಹೆತ್ತಮ್ಮ ಮಸಣದ ಮನೆಯಲ್ಲಿದ್ದರೆ, ಹೆತ್ತಪ್ಪ ದುಡಿಯಲು ಮಹಾರಾಷ್ಟ್ರ ಸೇರಿಕೊಂಡಿದ್ದಾನೆ. ಇತ್ತ ಮುತ್ತಿಟ್ಟು ತುತ್ತಿಡಬೇಕಾದ ಮಲತಾಯಿ ಮಸಣ ಸೇರುವಷ್ಟು ಹೊಡೆದು ಮಗುವಿಗೆ ಚಿತ್ರಹಿಂಸೆ ನೀಡಿದ್ದಾಳೆ. ಸದ್ಯ ಸಂಕಷ್ಟದಲ್ಲಿರುವ ಮಗು ಬೀದಿಗೆ ಬಿದ್ದು ಆಸರೆಗಾಗಿ ಅಂಗಲಾಚುತ್ತಿದೆ.
ಇದನ್ನೂ ಓದಿ: ಶಾಸಕ ಪ್ರಿಯಾಂಕ್ ಖರ್ಗೆ ಸ್ವರ್ಣ ಚಲನಚಿತ್ರದ ಪೋಸ್ಟರ್ ಬಿಡುಗಡೆ
ಈ ಹೃದಯ ವಿದ್ರಾವಕ ಘಟನೆ ಮಂಗಳವಾರ ಚಿತ್ತಾಪುರ ತಾಲೂಕಿನ ವಾಡಿ ನಗರ ಸಮೀಪದ ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ಬೆಳಕಿಗೆ ಬಂದಿದ್ದು, ಹೃದಯವೇ ತಲ್ಲಣಿಸುವ ಈ ಪೈಶಾಚಿಕ ಘಟನೆಗೆ ಜನರು ಮರುಗುತ್ತಿದ್ದಾರೆ.
ತಿಪ್ಪಣ್ಣ ಭಂಡಾರಿ ಪರಸಾಪುರ ಎಂಬ ದಲಿತನ ನಾಲ್ಕು ವರ್ಷದ ಬಾಲಕ ಸೋನಾಲಿಕಾ ಮಲತಾಯಿಂದ ನಿರಂತರವಾಗಿ ದೌರ್ಜನ್ಯಕ್ಕೀಡಾಗಿರುವ ಸಂಗತಿ ಬಯಲಾಗಿದೆ. ಮೊದಲ ಹೆಂಡತಿ ಓಡಿಹೋದ ಕಾರಣಕ್ಕೆ ನಾಲವಾರ ಸ್ಟೇಷನ್ ಬಡಾವಣೆಯ ಮರೆಮ್ಮ ಎಂಬ ಯುವತಿಯೊಂದಿಗೆ ಮತ್ತೊಂದು ಮದುವೆಯಾಗಿದ್ದ ತಿಪ್ಪಣ್ಣ, ಹೊಟ್ಟೆಪಾಡಿಗಾಗಿ ಕುಟುಂಬ ಸಮೇತ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದಾನೆ. ಎರಡನೇ ಹೆಂಡತಿ ಮರೆಮ್ಮ, ಮಗು ಸೋನಾಲಿಕಾಳೊಂದಿಗೆ ಹೆರಿಗೆಗೆಂದು ನಾಲವಾರಕ್ಕೆ ಬಂದಿದ್ದು, ಹದಿನೈದು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಇದನ್ನೂ ಓದಿ: ಸರ್ಕಾರದ ವಜಾಕ್ಕೆ ಬಿಎಸ್‌ಪಿ ಆಗ್ರಹ
ಈ ಮಧ್ಯೆ ಬಾಲಕಿ ಸೋನಾಲಿಕಾ ಆಟವಾಡಲು ಮನೆಯಿಂದ ಹೊರಗಡೆ ಹೋಗುತ್ತಿದ್ದಳು ಎನ್ನಲಾಗಿದ್ದು, ಆಕೆಯ ರಕ್ಷಣೆ ಮಾಡಲಾಗದೆ ಬೇಸತ್ತು ಎರಡೂ ಕೈಗಳ ಬೆರಳಿಗೆ ಬರೆಯಿಟ್ಟಿದ್ದಾಳೆ. ಹೊರಗಡೆ ಹೋಗುವುದನ್ನು ತಡೆಯಲು ಮನೆಯ ಮಂಚಕ್ಕೆ ಕಟ್ಟಿ ಹಿಂಸೆ ನೀಡಿದ್ದಾಳೆ. ಹಸಿವು ತಾಳದೆ ಊಟ ಕೇಳಿದ್ದಕ್ಕೆ ಥಳಿಸಿದ್ದಾಳೆ. ಹೀಗೆ ಮಗುವಿನ ಮೇಲೆ ನಿರಂತರವಾಗಿ ದೈಹಿಕ ದೌರ್ಜನ್ಯ ಎಸಗಿದ್ದಾಳೆ ಎಂಬ ಮನ ಕಲಕುವ ಘಟನೆ ಗ್ರಾಮಸ್ಥರಿಂದ ಬೆಳಕಿಗೆ ಬಂದಿದೆ.
ಇದು ದಿನನಿತ್ಯದ ಸಮಸ್ಯೆಯಾಗಿ ಹಸುಳೆ ಕಂದಮ್ಮ ಜಗತ್ತು ಅರೆಯುವ ಮೊದಲೇ ದೌರ್ಜನ್ಯ ಅನುಭವಿಸುತ್ತಿದ್ದು, ಬಡಾವಣೆಯ ಜನರು ಮಹಿಳೆಯ ವಿರುದ್ಧ ಸಿಡಿದೆದ್ದಿದ್ದಾರೆ. ಸೋಮವಾರ ಮತ್ತೆ ಮಗುವಿನ ಕೈಗೆ ಬರೆ ಬಿದ್ದು ಅಳುತ್ತು ಬೀದಿಗೆ ಬಂದಾಗ ಜನರು ಒಗ್ಗಟ್ಟಾಗಿದ್ದಾರೆ. ಮನೆಗೆ ಹೋಗಿ ಮಲತಾಯಿ ಮರೆಮ್ಮಳ ಜತೆ ವಾಗ್ವಾದ ನಡೆಸಿದ್ದಾರೆ. ನೀನೇನು ಮನುಷ್ಯಳಾ ಪಿಶಾಚಿನಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲೇ ಬಿಟ್ಟರೆ ಮಗುವನ್ನು ಈಕೆ ಸಾಯಿಸುತ್ತಾಳೆ ಎಂದು ನಿರ್ಧರಿಸಿ ವಾಡಿ ಠಾಣೆಯ ಪೊಲೀಸರಿಗೆ ಹಾಗೂ ಚೈಲ್ಡ್ ಲೈನ್ ಸಹಾಯವಾಣಿ (1098)ಗೆ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ: ರೈತರು ಇ-ಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನ
ಎಚ್ಚೆತ್ತ ಬಡಾವಣೆಯ ಜನರ ಸಹಾಯದಿಂದಾಗಿ ಬಾಲಕಿ ಸೋನಾಲಿಕಾ ರಕ್ಷಣೆಯಾಗಿದ್ದಾಳೆ. ಅಂಗನವಾಡಿ ಮೇಲ್ವಿಚಾರಕಿ ಸರಳಾ ಹಾದಿಮನಿ ಅವರು ನೀಡಿದ ದೂರಿನ ಮೇರೆಗೆ ಕಲಬುರಗಿ ಅಮೂಲ್ಯ ಶಿಶುವಿಹಾರಕ್ಕೆ ಒಪ್ಪಿಸಲಾಗಿದೆ. ಆರೋಗ್ಯ ತಪಾಸಣೆ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಾಡಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಆರೋಪಿ ಮಹಿಳೆ ಮರೆಮ್ಮಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜನಸಮರ್ಥ ಆನ್‌ಲೈನ್ ಪೋರ್ಟಲ್ ವ್ಯವಸ್ಥೆ-ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ: ಸಂಸದ ಜಾಧವ