ಕೆ.ಕೆ.ಆರ್.ಡಿ.ಬಿ.ಗೆ ಪ್ರತ್ಯೇಕ ಇಂಜಿನೀಯರಿಂಗ್ ವಿಂಗ್ ಸ್ಥಾಪನೆ: ಮುನಿರತ್ನ

0
22

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ವೇಗ ಪಡೆಯಲು ಅನುಕೂಲವಾಗುವಂತೆ ಮಂಡಳಿಗೆ ಪ್ರತ್ಯೇಕವಾಗಿ ಇಂಜಿನೀಯರಿಂಗ್ ವಿಂಗ್ ಸ್ಥಾಪಿಸಲಾಗುವುದು ಎಂದು ರಾಜ್ಯದ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಮುನಿರತ್ನ ಹೇಳಿದರು.

ಶುಕ್ರವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರದೇಶದ 7 ಜಿಲ್ಲೆಗಳ 41 ತಾಲೂಕುಗಳಿಗೆ ಲೊಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರರು ಒಬ್ಬರೆ ಇದ್ದಾರೆ. ಇಂಜಿನಿಯರಿಂಗ್ ವಿಂಗ್ ಸ್ಥಾಪನೆ ಅವಶ್ಯಕತೆ ಮನವರಿಕೆಯಾಗಿದ್ದು, ಖಂಡಿತವಾಗಿಯೂ ಸ್ಥಾಪಿಸಲಾಗುವುದು. ಇದಲ್ಲದೆ ಮಂಡಳಿಗೆ ಅಗತ್ಯವಿರುವ ಅಧಿಕಾರಿಗಳ-ಸಿಬ್ಬಂದಿ ಭರ್ತಿಗೂ ಕ್ರಮ ವಹಿಸಲಾಗುವುದು ಎಂದರು.

Contact Your\'s Advertisement; 9902492681

ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳೆದ 3 ವರ್ಷದಲ್ಲಿ (2019-20 ರಿಂದ 2021-22) ಕ್ರಿಯಾ ಯೋಜನೆ ಅನುಮೋದನೆ ಪಡೆದ 799 ಕಾಮಗಾರಿಗಳು ಇನ್ನು ಆರಂಭವಾಗಿಲ್ಲ. ಇದರಲ್ಲಿ ಕಲಬುರಗಿ ಜಿಲ್ಲೆ-244 ಮತ್ತು ವಿಜಯನಗರ ಜಿಲ್ಲೆ-228 ಅತಿ ಹೆಚ್ಚುಗಳಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಮಂಡಳಿಯ ಕಾಮಗಾರಿಗಳ ವಿಳಂಬಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದೆ. ಪ್ರಸಕ್ತ 2022-23ನೇ ಸಾಲಿನ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ ಜಿಲ್ಲೆಗಳಿಗೆ ಐತಿಹಾಸಿಕವಾಗಿ ಕಳೆದ ಏಪ್ರಿಲ್ ತಿಂಗಳಿನಲ್ಲಿಯೇ ಮಂಜೂರಾತಿ ನೀಡಲಾಗಿದೆ. ತಡವಾಗಿ ಸಲ್ಲಿಸಿದ ಉಳಿದ ಜಿಲ್ಲೆಗಳ ಪ್ರಸ್ತಾವನೆಗೆ ಮುಂದಿನ ವಾರ ಅನುಮೋದನೆ ನೀಡಲಾಗುತ್ತದೆ. ಇವುಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಕ್ರಿಯಾ ಯೋಜನೆ ಅನುಮೋದನೆ ನಂತರ ಕಾಮಗಾರಿ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದರು.

ಅತಿವೃಷ್ಠಿಯಿಂದಾದ ಹಾನಿಯಾದ ತೋಟಗಾರಿಕೆ ಬೆಳೆಗಳಿಗೆ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ತ್ವರಿತವಾಗಿ ಬೆಳೆ ಪರಿಹಾರ ನೀಡಲಾಗುತ್ತಿದೆ. ಹಿಂದೆಲ್ಲ ವರ್ಷಗಟ್ಟಲೆ ಬೇಕಾಗುತ್ತಿದ್ದು, ನಮ್ಮ ಸರ್ಕಾರ ತಕ್ಷಣವೇ ಪರಿಹಾರ ನೀಡುತ್ತಿದೆ. ಕಮಲಾಪೂರಿನ ಕೆಂಬಾಳೆಗೆ ಭೌಗೋಳಿಕ ಸೂಚ್ಯಂಕ ದೊರಕಿದ್ದರು ನಿರೀಕ್ಷಿತ ಮಟ್ಟದಲ್ಲಿ ಅದಕ್ಕೆ ಮಾನ್ಯತೆ ಸಿಕ್ಕಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಬಗ್ಗೆ ಕೂಡಲೆ ಗಮನಹರಿಸಲಾಗುವುದು ಎಂದು ಸಚಿವರು ಉತ್ತರಿಸಿದರು.

ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಪ್ರದೇಶದ ಎಲ್ಲಾ ಜಿಲ್ಲೆಗಳು ಸೇರಿದಂತೆ ಕಲಬುರಗಿಯಲ್ಲಿ ಮಂಡಳಿಯಿಂದ ಬೃಹತ್ ಉತ್ಸವ ಆಯೋಜನೆಗೆ ಯೋಚಿಸಿದ್ದು, ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಇದರ ಯಶಸ್ಸಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.

ಪಕ್ಷಪಾತ ಇಲ್ಲ: ಮಂಡಳಿಯಿಂದ ಅನುದಾನ ಹಂಚಿಕೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರಿಗೆ ಪಕ್ಷಪಾತ ಮಾಡಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲ್ಲಿ ಪಕ್ಷಪಾತದ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲೂಕುಗಳಿಗೆ ನಿಗದಿಯಂತೆ ಅನುದಾನ ಹಂಚಿಕೆ ಮಾಡುತ್ತಿದ್ದು, ಅದಕ್ಕನುಗುಣವಾಗಿ ಶಾಸಕರು ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಜೂರಾತಿ ನೀಡಲಾಗುತ್ತಿದೆ ಎಂದರು.

ಕ.ಕ.ಭಾಗದಲ್ಲಿ 7089.53 ಕೋಟಿ ರೂ. ಖರ್ಚು: ಕಲ್ಯಾಣ ಕರ್ನಾಟಕ ಭಾಗದಲ್ಲಿ 2013-14 ರಿಂದ 2022-23ನೇ ಸಾಲಿನ ಇಂದಿನ ವರೆಗೆ 27,062 ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದು, ಇದರಲ್ಲಿ 21,872 ಪೂರ್ಣಗೊಂಡಿದ್ದರೆ 3,058 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಆರಂಭವಾಗದ 2,132 ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದೂವರೆಗೆ ಮಂಡಳಿಗೆ ಹಂಚಿಕೆಯಾದ 11,878.33 ಕೋಟಿ ರೂ. ಗಳ ಪೈಕಿ 7,328.80 ಕೋಟಿ ರೂ. ಬಿಡುಗಡೆಯಾಗಿ 7,089.53 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಅಂಕಿ-ಸಂಖ್ಯೆಗಳೊಂದಿಗೆ ಸಚಿವರು ವಿವರ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here