ಸುರಪುರ: ತಾಲೂಕಿನಲ್ಲಿನ ರೈತರಿಗೆ ರಸಗೊಬ್ಬರದ ಕೊರತೆ ಉಂಟಾಗಿದ್ದು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರದ ಕೊರತೆ ನೀಗಿಸದಿದ್ದಲ್ಲಿ ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಎಚ್ಚರಿಸಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಗರದಲ್ಲಿನ ಗೊಬ್ಬರ ಅಂಗಡಿಗಳಲ್ಲಿ ಗೊಬ್ಬರ ದಾಸ್ತಾನು ಇದ್ದರು ಇಲ್ಲವೆಂದು ಸುಳ್ಳು ಹೇಳಿ ರೈತರಿಗೆ ಮಾರಟಗಾರರು ತೊಂದರೆ ಮಾಡುತ್ತಿದ್ದಾರೆ.ಕೃಷಿ ಅಧಿಕಾರಿಗಳಿಗೆ ಕೇಳಿದರೆ ರಸಗೊಬ್ಬರ ಅಂಗಡಿಯವರ ಪರವಾಗಿ ಅಧಿಕಾರಿಗಳು ಮಾತನಾಡುತ್ತಿದ್ದಾರೆ.ಇದನ್ನು ನೋಡಿದರೆ ಅಧಿಕಾರಿಗಳು ಗೊಬ್ಬರ ಅಂಗಡಿಯವರ ಜೊತೆ ಶಾಮೀಲಾಗಿದ್ದಾರೆ ಅನಿಸುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಅಧಿಕಾರಿಗಳು ತಾಲೂಕಿನ ಎಲ್ಲಾ ಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಕೂಡಲೇ ರೈತರಿಗೆ ಅಗತ್ಯವಿದ್ದಷ್ಟು ಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಇನ್ನೂ ಮೂರು ದಿನಗಳ ನಂತರ ಕೃಷಿ ಇಲಾಖೆ ಕಚೇರಿಗೆ ಬೀಗ ಹಾಕಿ ಮತ್ತು ಗೊಬ್ಬರ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ವೆಂಕಟೇಶ ಕುಪಗಲ್,ರಾಘು ಕುಪಗಲ್,ಭೀಮಣ್ಣ ತಿಪ್ಪನಟಗಿ,ರತ್ನಪ್ಪ ಪೂಜಾರಿ,ಭೀಮನಗೌಡ ಗುಂಡಾಪುರ,ಅಳವಳೆಪ್ಪ ನೀಲವಂಜಿ,ಭೀರಣ್ಣ ಸಾಹುಕಾರ ಸೇರಿದಂತೆ ಇತರರಿದ್ದರು.