ಬೀದರ್: ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಆರಂಭಿಸಿರುವ ನಗರದ ವಾರ್ಡ್ ನಂಬರ್ ೧೭ರಲ್ಲಿನ ಮಾಧವ್ ನಗರದ ಖಾಲ್ಸಾ ಪಬ್ಲಿಕ್ ಇಂಗ್ಲೀಷ್ ಮಾಧ್ಯಮದ ಸ್ಕೂಲ್‌ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೀಗ ಜಡಿದಿರುವುದು ಸರಿಯಲ್ಲ ಎಂದು ಕಿರಪಾಲಸಿಂಗ್ ಎಜುಕೇಶನ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಸಂತೋಷ್ ಸಿಂಗ್ ಅವರು ಇಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಯ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧವ ನಗರದಲ್ಲಿ ೨೦೧೯-೨೦೨೦ನೇ ಸಾಲಿನಲ್ಲಿ ಖಾಲ್ಸಾ ಪಬ್ಲಿಕ್ ಸ್ಕೂಲ್ ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾರಂಭಿಸಲು ಸರ್ಕಾರದ ನೀತಿ ನಿಯಮದಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಖಜಾನೆ ಮೂಲಕ ಶುಲ್ಕ ಭರಿಸಿ ಅನುಮತಿಗಾಗಿ ಎಲ್ಲ ಅವಶ್ಯ ದಾಖಲಾತಿ ಪತ್ರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಲಾಗಿದೆ ಎಂದರು. ಈ ನಿಟ್ಟಿನಲ್ಲಿ ಸಂಬಂಧಿತ ಕಚೇರಿಗಳಿಂದ ಶಾಲೆಗೆ ಅನುಮತಿ ಪತ್ರ ನೀಡಲಾಗುವುದು ಎಂದು ಆಶ್ವಾಸನೆ ನೀಡಿರುವ ಮೇರೆಗೆ ಶಾಲೆ ಪ್ರಾರಂಭಿಸಲಾಗಿದೆ. ಆದಾಗ್ಯೂ, ಕಳೆದ ೨೬ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರೇಹಮಾ ಪಬ್ಲಿಕ್ ಸ್ಕೂಲ್‌ನವರು ವಿನಾಕಾರಣ ನೀಡಿದ ದೂರಿನ ಮೇರೆಗೆ ಭೇಟಿ ನೀಡಿ ಶಾಲೆಗೆ ಬೀಗ ಜಡಿದು ಶಿಕ್ಷಣ ನೀಡುವ ಕಾರ್ಯಕ್ಕೆ ತಡೆ ಮಾಡಿರುವುದು ಖೇದಕರ ಸಂಗತಿ. ಕೂಡಲೇ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ನಿಯಮದಂತೆ ಕಳೆದ ಮಾರ್ಚ್ ೧೬ರಂದು ಖಾಲ್ಸಾ ಪಬ್ಲಿಕ್ ಶಾಲೆಯ ಹೆಸರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದು, ಕಳೆದ ಜೂನ್ ೧ರಿಂದಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ. ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿಗೆ ೬೦ ಮಕ್ಕಳ ಸಂಖ್ಯೆಗಾಗಿ ಅನುಮತಿ ಕೋರಲಾಗಿದೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ೭೫೦೦ರೂ.ಗಳ ಶುಲ್ಕ ಭರಿಸಲಾಗಿದೆ. ಈ ಕುರಿತು ದೃಢೀಕರಣಗೊಂಡಿದ್ದು, ಕಾನೂನಿನ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರೇಹಮಾ ಪಬ್ಲಿಕ್ ಸ್ಕೂಲ್‌ನವರು ವಾರ್ಡ್ ಸಂಖ್ಯೆ ೧೮ರಲ್ಲಿ ಅನುಮತಿ ಪಡೆದು ಮಾಧವನಗರದ ವಾರ್ಡ ಸಂಖ್ಯೆ ೧೭ರಲ್ಲಿ ತಮ್ಮ ಶಾಲೆಯ ಪಕ್ಕದಲ್ಲಿಯೇ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ ಮತ್ತು ದ್ವೇಷ ಹಾಗೂ ಅಸೂಯೆಯಿಂದ ಶಾಲೆಯ ವಿರುದ್ಧ ದೂರು ನೀಡಿರುವುದು ದುಃಖದ ಸಂಗತಿಯಾಗಿದೆ. ನಾವು ಆ ಶಾಲೆ ಮಕ್ಕಳ ಭವಿಷ್ಯ ಹಾಳಾಗಬಾರದೆಂದು ವಿರೋಧಿಸುವುದಿಲ್ಲ ಎಂದ ಅವರು, ತಮ್ಮ ಶಾಲೆಯಲ್ಲಿ ಸುಮಾರು ೪೦ ಮಕ್ಕಳು ಇಬ್ಬರು ಶಿಕ್ಷಕರು ಇದ್ದು ಉತ್ತಮ ಕಟ್ಟಡ ತರಗತಿ ಕೋಣೆಗಳಿದ್ದು, ಒಳ್ಳೆಯ ಶಿಕ್ಷಣ ನೀಡುವ ತಮ್ಮ ಸಂಕಲ್ಪವನ್ನು ಪರಿಗಣಿಸಿ ಜಿಲ್ಲಾಡಳಿತ ಬೀಗ ಮುದ್ರೆ ತೆರೆಸಿ ಶಾಲೆ ಪ್ರಾರಂಭಿಸಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಕರತಾರಸಿಂಗ್, ರೇಣುಕಾ ಸಂತೋಷ್ ಸಿಂಗಜೀ, ಸಚಿನ್ ಹೆಗಡೆ, ಪ್ರೊ. ಹಣಮಂತರಾವ್ ಸೇರಿದಂತೆ ಮಕ್ಕಳ ಪಾಲಕರು ಉಪಸ್ಥಿತರಿದ್ದರು.