ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.ಆದರೆ ಈ ಹಿಂದೆ ಭರವಸೆ ನೀಡಿದಂತೆ ಅನುದಾನ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿಲ್ಲ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ವರ್ಷ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಭಾಷಣದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಹಾಗೂ ಅನುದಾನ ಬಿಡುಗಡೆ ಬಗ್ಗೆ ವಾಗ್ದಾನ ಮಾಡಿದ್ದರು.ಆದರೆ ಕೇವಲ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ಜೊತೆಗೆ ಇನ್ನು 1500 ಕೋಟಿ ಹಣ ನೀಡುವ ಭರವಸೆ ನೀಡಿದ್ದರು.ಆದರೆ ಒಂದಿಷ್ಟು ಹಣ ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದ್ದಾರೆ.ಕೆಕೆಆರ್ ಡಿಬಿಯಲ್ಲಿ ತಜ್ಞರ ಸಮಿತಿ ಇಲ್ಲ.ಕಾರ್ಯ ಯೋಜನೆಗಳ ಕುರಿತು ಚರ್ಚೆ ನಡೆಯುತ್ತಿಲ್ಲ.ಮಂಡಳಿ ಅಧ್ಯಕ್ಷರ ಮೇಲೆ ಒತ್ತಡ ಹೆಚ್ಚಾಗಿದೆ.ಹೀಗಾಗಿ ತಜ್ಞರ ನೇಮಕಕ್ಕೆ ಸರಕಾರ ಕೂಡಲೇ ಶೀಫಾರಸ್ಸು ಮಾಡಿ ಸಮಿತಿ ರಚಿಸಬೇಕು ಎಂದರು.
ಈ ಬಾರಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಅತಿವೃಷ್ಟಿ ಕುರಿತು ಮಾತನಾಡಿಲ್ಲ.ರೈತರು ಬೆಳೆ ನಷ್ಟದಿಂದ ತೊಂದರೆಗೆ ಸಿಲುಕಿದ್ದಾರೆ.ಮುಂಗಾರು ಬೆಳೆಗಳು ಸಂಪೂರ್ಣ ಹಾಳಾಗಿದ್ದು ಪರಿಹಾರ ಕಾರ್ಯ ಕುರಿತು ಅಧಿಕಾರಿಗಳ ಸಭೆ ನಡೆಸದೆ ಇರುವುದು ನಿರಾಸೆ ಮೂಡಿಸಿದೆ.
ಕಳೆದ ವರ್ಷ ಭರವಸೆ ನೀಡಿದ್ದ ಖಾಲಿ ಇರುವ ಹುದ್ದೆಗಳ ಭರ್ತಿ,371ನೇ ಜೆ ಕೋಶ ಕಚೇರಿ ಸ್ಥಾಪನೆ, ತೊಗರಿ ಮಂಡಳಿ ಪುನಶ್ಚೇತನದಂಥ ಯೋಜನೆಗಳು ಹುಸಿಯಾಗಿವೆ.ತರಾತುರಿಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಗೆ ಕೇವಲ ಕಾಟಾಚಾರಕ್ಕೆ ಎಂಬಂತೆ ಬಂದು ಹೋಗಿದ್ದಾರೆ.ಈ ಬಾರಿಯಾದರೂ ಘೋಷಿಸಿರುವ 5 ಸಾವಿರ ಕೋಟಿ ರೂಪಾಯಿಗಳ ಅನುದಾನ ಕೂಡಲೇ ಕಾಲಮಿತಿಯೊಳಗೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.