ಶಹಾಬಾದ: ಹದಿ ಹರೆಯದ ವಯಸ್ಸಿನ ಮಕ್ಕಳು ಬಾಲಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪುವ ಹಂತದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆಯಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಹೇಳಿದರು.
ಅವರು ಶುಕ್ರವಾರ ನಗರದ ಎಂಸಿಸಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಕಲ್ಬುರ್ಗಿ ರಾಷ್ಟ್ರೀಯ ಆರೋಗ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲ್ಬುರ್ಗಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ ಎಂಸಿಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಕಿಶೋರ ಸ್ವಾಸ್ಥ ಕಾರ್ಯಕ್ರಮದ ಹದಿಹರೆಯದ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯಲ್ಲಿ ಮಾತನಾಡಿದರು.
ನಮ್ಮ ಎಲ್ಲ ಸಾಧನೆ ಸಿದ್ದಿಗಳಿಗೆ ತಳಹದಿ ಎಂದರೆ ನಮ್ಮ ಆರೋಗ್ಯ. ಹದಿಹರೆಯದ ಸಮಸ್ಯೆಗಳು ಅನೇಕ ದೈಹಿಕ ಭಾವನಾತ್ಮಕ ಬದಲಾವಣೆಯ ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ಇಲ್ಲದೇ ವಿದ್ಯಾರ್ಥಿಗಳು ತಮ್ಮ ಬದುಕನ್ನು ದುರ್ಭರಗೊಳಿಸಿಕೊಳ್ಳುತ್ತಿದ್ದಾರೆ. ದೈಹಿಕ -ಮಾನಸಿಕ ಬದಲಾವಣೆಗಳ ಬಗ್ಗೆ ಸೂಕ್ತ ತಿಳಿವಳಿಕೆ ಪಡೆದು ಸಮಾಜದ ಆರೋಗ್ಯ ರಕ್ಷಣೆಗೆ ಕಾರಣ ಬದ್ಧರಾಗಬೇಕು ಎಂದು ತಿಳಿಸಿದರು.
ದಂತ ವೈಧ್ಯೆ ಡಾ.ಸಂಧ್ಯಾ ಡಾಂಗೆ ಮಾತನಾಡಿ, ಹದಿ ಹರೆಯದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಉಂಟಾಗಿ ಅವರ ಮನಸ್ಸಿನಲ್ಲಿ ಆತಂಕ, ಭಯ, ಖಿನ್ನತೆ ಉಂಟಾಗುತ್ತದೆ. ಇದು ಮಾನಸಿಕ ಚಂಚಲತೆಗೆ ಕಾರಣವಾಗಿ ದಾರಿ ತಪ್ಪಲು ಕಾರಣವಾಗುತ್ತದೆ. ಪೋಷಕರು ಹಾಗೂ ಶಿಕ್ಷ ಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಅವಶ್ಯಕತೆ ಇದೆ. ಹದಿಹರೆಯದ ವಯಸ್ಸಿನಲ್ಲಿಯೇ ಮಕ್ಕಳು ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಂಡರೆ ಜೀವನ ಪೂರ್ತಿ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಎಂಸಿಸಿ ಶಾಲೆಯ ಮುಖ್ಯಾಧಿಕಾರಿ ಸಿಸ್ಟರ್ ಲಿನೆಟ್ ಸಿಕ್ವೇರಿಯಾ ಮಾತನಾಡಿ, ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳುವುದು,ಸ್ವಚ್ಛತೆ ಕಾಪಾಡಿಕೊಳ್ಳುವುದು,ದುಶ್ಚಟಗಳಿಂದ ದೂರವಿರುವುದು,ಪೌಷ್ಟಿಕ ಆಹಾರ ಸೇವನೆ,ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ದೈಹಿಕ ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾದರೆ ವೈದ್ಯರ ಸಲಹೆ ಪಡೆಯಬೇಕೆಂದು ತಿಳಿಸಿದರು.ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಅಮರೇಶ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಶಂಕರ ರಾಠೋಡ, ಸಮುದಾಯ ಆರೋಗ್ಯ ಕೇಂದ್ರದ ಕಚೇರಿ ಅಧೀಕ್ಷಕ ಮೋಹನಕುಮಾರ ಗಾಯಕ್ವಾಡ್, ಎನ್‍ಸಿಡಿ ಆಪ್ತ ಸಮಾಲೋಚಕರಾದ ಸುಮಂಗಲಾ ಕಿಣಗಿ, ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಬಸಯ್ಯ ಹಿರೇಮಠ, ಆರೋಗ್ಯ ಸಂರಕ್ಷಣಾಧಿಕಾರಿ ಯುಸೂಫ್ ನಾಕೇದಾರ, ಶಂಕರ್ ವಾಲಿಕರ್ ಉಪಸ್ಥಿತರಿದ್ದರು.