ಜೇವರ್ಗಿ: ಆಡಳಿತದಲ್ಲಿರುವ ಸರ್ಕಾರವು ರೈತರ ಹಾಗೂ ಸಾಮಾನ್ಯ ವರ್ಗದ ಜನರ ಬೇಡಿಕೆಗಳನ್ನು ಪರಿಗಣಿಸುತ್ತಿಲ್ಲ. ಅನವಶ್ಯಕವಾಗಿ ವಿದ್ಯುತ್ತಿನ ದರವನ್ನು ಹೆಚ್ಚಳ ಮಾಡುತ್ತಿರುವುದು ರೈತ ವಿರೋಧಿ ಪ್ರಜಾ ವಿರೋಧಿ ನೀತಿಯಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷರು ಜಾತ್ಯತೀತ ಜನತಾದಳ ಶಂಕರಕಟ್ಟಿ ಸಂಗಾವಿ ವಿರೋಧಿಸಿದ್ದಾರೆ.
ತಾಲೂಕಿನಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸದ ಶಾಸಕರು ಹಾಗೂ ಜನಪ್ರತಿನಿಧಿಗಳು ಹೊಣಿಗೆಡಿತ ನೀತಿಯನ್ನು ಪ್ರದರ್ಶಿಸುತ್ತಿದ್ದು, ಪ್ರಗತಿ ಕಾಮಗಾರಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸುತ್ತಿದ್ದು ಸಾರ್ವಜನಿಕರಿಗೆ ಬಡ ರೈತರಿಗೆ ದಿಕ್ಕು ತೋಚದಂತಾಗಿದೆ ಎಂದು ಕಟ್ಟಿ ಸಂಗಾವಿ ಸರಕಾರದ ಹಾಗೂ ಶಾಸಕರ ಕ್ರಮವನ್ನು ತರಾಟೆಗೆ ತೆಗೆದುಕೊಂಡರು .
ರೈತರಿಗೆ ಬೆಳೆ ಪರಿಹಾರ ನೀಡಬೇಕು, ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು, ಕತ್ತಲಲ್ಲಿ ಮುಳುಗಿರುವ ಜೇವರ್ಗಿ ಪಟ್ಟಣದಲ್ಲಿ ಬೀದಿ ದೀಪದ ವ್ಯವಸ್ಥೆ ಆಗಬೇಕು, ಪಟ್ಟಣದ ಜನರಿಗೆ ಶುದ್ಧವಾದ ಕುಡಿಯುವ ನೀರು ಹಾಗೂ ಶೌಚಾಲದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎನ್ನುವ ಪ್ರಮುಖವಾದ 10 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜೇವರ್ಗಿ ತಹಸೀಲ್ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ತಿಳಿಸಿದರು.