ಶಹಾಬಾದ: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಶುಕ್ರವಾರ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯ ಮುಂಭಾಗದಲ್ಲಿ ತೊನಸನಹಳ್ಳಿ(ಎಸ್) ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಖಣದಾಳ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೇ ಭೋಗಸ್ ಬಿಲ್‍ಗಳನ್ನು ಸೃಷ್ಠಿಸಿ ಸುಮಾರು 16 ಲಕ್ಷ ರೂ.ಯನ್ನು ಅಧ್ಯಕ್ಷ ಹಾಗೂ ಪಿಡಿಓ ಕೂಡಿಕೊಂಡು ಅವ್ಯವಹಾರ ಮಾಡಿದ್ದಾರೆ.ಈಗಾಗಲೇ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಒಂದು ತಿಂಗಳ ಆಗಿಲ್ಲ ಹಾಗೂ ನೂತನ ಪಿಡಿಓ ಅವರು ಗ್ರಾಮ ಪಂಚಾಯಿತಿಗೆ ಬಂದು ಕೇವಲ ಎರಡು ತಿಂಗಳ ಆಗಿದೆ. ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಅವರು ಒಳ ಒಪ್ಪಂದ ಮಾಡಿಕೊಂಡು 15ನೇ ಹಣಕಾಸು ಯೋಜನೆ ಅಡಿ ಕೆಲಸ ಮಾಡದೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅಗಸ್ಟ ತಿಂಗಳಲ್ಲಿ 3,94,684 ರೂ. ಮತ್ತು ಸೆಪ್ಟೆಂಬರ ಒಂದೇ ತಿಂಗಳಲ್ಲಿ ಸುಮಾರು 12,52,613 ರೂ. ಹಣವನ್ನು ತಮ್ಮ ಬೇಕಾದವರಿಗೆ ಹಣ ವರ್ಗಾವಣೆ ಮಾಡಿಸಿ ಅವರಿಂದ ಕಾಮಗಾರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗೋಳಾ(ಕೆ) ಹಾಗೂ ತರನಳ್ಳಿ ಗ್ರಾಮಗಳಲ್ಲಿ ಯಾವುದೇ ಕಾಮಗಾರಿ ಮಾಡದೆ ಕೊಟ್ಟಿಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ.ಅಲ್ಲದೇ ಯಾವುದೇ ಕಾಮಗಾರಿ ಕ್ರೀಯಾಯೋಜನೆ ಸಿದ್ಧಪಡಿಸದೇ ಮತ್ತು ಸದಸ್ಯರ ಗಮನಕ್ಕೂ ತರದೇ ಎಲ್ಲಾ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ.ಅಲ್ಲದೇ ಕಳೆದ ಸೆಪ್ಟೆಂಬರ್ 16ರಂದು ಸಭೆ ನಡೆಸಲಾಗಿದೆ ಎಂದು ಹೇಳುತ್ತಿದ್ದಾರೆ.ಆದರೆ ಬಹುತೇಖ ಸದಸ್ಯರ ಸಭೆಯೇ ನಡೆಸಿಲ್ಲ ಎಂದು ಗ್ರಾಪಂ ಸದಸ್ಯರೇ ಹೇಳುತ್ತಾರೆ. ಸದಸ್ಯರ ಸಭೆಯನ್ನು ಕರೆಯದೇ, ಗ್ರಾಪಂ ಸಿಬ್ಬಂದಿ ಮೂಲಕ ಸದಸ್ಯರ ಮನೆಮನೆಗೆ ಹೋಗಿ ಸುಳ್ಳು ಹೇಳಿ ಸಹಿ ತೆಗೆದುಕೊಂಡು, ಸಭೆ ನಡೆಸಲಾಗಿದೆ ಎಂದು ಸುಳ್ಳು ದಾಖಲೆ ಮಾಡಿದ್ದಾರೆ.
ಈ ಕುರಿತು ಜಿಪಂ ಸಿಇಓ ಅವರಿಗೆ ದೂರು ನೀಡಲಾಗಿದೆ.ಆದರೂ ಕ್ರಮಕೈಗೊಂಡಿಲ್ಲ. ಕೂಡಲೇ ಸಮಗ್ರ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕ್ರಮಕೈಗೊಳ್ಳಬೇಕು.ಅವ್ಯವಹಾರ ಮಾಡಿದ ಹಣ ಮರುಪಾವತಿಯಾಗಬೇಕು.ಸಭೆ ಮಾಡದೇ ಸುಳ್ಳು ದಾಖಲೆ ಮಾಡಿದ ಪಿಡಿಓನನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ತಾಪಂ ಸಹಾಯಕ ನಿರ್ದೇಶಕಿ ಕಾವೇರಿ ಅವರಿಗೆ ಮನವಿ ಪತ್ರ ನೀಡಿದರು.
ತಾಪಂ ಸಹಾಯಕ ನಿರ್ದೇಶಕಿ ಕಾವೇರಿ ಅವರು ಸ್ಥಳಕ್ಕೆ ಬೇಟಿ ನೀಡಿ ಒಂದು ವಾರದಲ್ಲಿ ತನಿಖೆ ಕೈಗೊಂಡು ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಖಣದಾಳ,ವೀರಯ್ಯಸ್ವಾಮಿ ತರನಳ್ಳಿ, ಹಣಮಂತ ಕೊಂಡಯ್ಯ, ಲಕ್ಷ್ಮಣ ಕೊಲ್ಲೂರ್, ಶವಯೋಗಿ ಸಾಹು, ಚಂದ್ರಯ್ಯಸ್ವಾಮಿ, ಮೈಬೂಬ,ಅಬ್ಬಾಸಲಿ ಲದಾಫ್, ವಿಠ್ಠಲ ಚವ್ಹಾಣ, ಚಂದ್ರಕಾಂತ ಪಾಟೀಲ, ವೆಂಕಟೇಶ ದಂಡಗುಲಕರ್, ಕಾಶಿರಾಯ ಕುಂಬಾರ, ಸಂಗಣ್ಣಗೌಡ ಪಾಟೀಲ, ಜಗದೀಶ ಪಾಟೀಲ, ದೇವಾನಂದಸ್ವಾಮಿ, ಗುರುಶಾಂತಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.