ಕಲಬುರಗಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ನಷ್ಟಕ್ಕೆ ಸರಕಾರ ರೈತರ ಖಾತೆಗೆ ಕಡಿಮೆ ಪರಿಹಾರದ ಹಣ ಜಮಾ ಮಾಡಿ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಬಲವಾಗಿ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿ ಹೆಕ್ಟೇರಿಗೆ ಸುಮಾರು 13600 ರಿಂದ 22 ಸಾವಿರ ರೂಪಾಯಿ ಪರಿಹಾರದ ಹಣ ನೀಡುವುದಾಗಿ ತಿಳಿಸಿದ್ದಾರೆ.ಆದರೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ಬಿಟ್ಟರೆ ಕೆಲವು ರೈತರ ಖಾತೆಗೆ ಕೇವಲ 8200 ರೂ ಮಾತ್ರ ಜಮೆ ಆಗಿದೆ.
ಬಾಕಿ ಹಣ ಬಗ್ಗೆ ಜಿಲ್ಲಾಡಳಿತ ಮೌನವಾಗಿದೆ.ಈಗಾಗಲೇ ಬಿಡುಗಡೆಗೆ ಆಗಿರುವ ಬೆಳೆ ಪರಿಹಾರ ರೂ 8200 ಎನೇನೂ ಸಾಲದು.ರೈತರು ಪ್ರತಿ ಎಕರೆಗೆ 10 ಸಾವಿರ ಖರ್ಚು ಮಾಡಿದ್ದಾರೆ.ಹೇಕ್ಟರೀಗೆ ಸರಾಸರಿ 25 ಸಾವಿರ ಖರ್ಚಾಗುತ್ತದೆ.ಆದರೆ ಕಡಿಮೆ ಪರಿಹಾರದ ಹಣ ನೀಡಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಮುಂಗಾರು ಬೆಳೆಗಳಾದ ಹೆಸರು,ಉದ್ದು, ಸೋಯಾಬೀನ್ ಬೆಳೆಗಳು ನಿರಂತರ ಮಳೆಯಿಂದ ಹಾನಿಗೊಳಗಾಗಿವೆ.ಜಿಲ್ಲೆಯ ಪ್ರಮುಖ ಬೆಳೆ ತೊಗರಿ ಈ ಬಾರಿ ನೀರೀಕ್ಷೆಗೆ ತಕ್ಕಂತೆ ಫಸಲು ಬರುವುದು ಅನುಮಾನವಾಗಿದೆ.ಅತಿವೃಷ್ಟಿಯಿಂದ ಕಬ್ಬು,ಹತ್ತಿ ಹಾಗೂ ಬಾಳೆ ಬೆಳೆಗಳಿಗೂ ಹಾನಿಯಾಗಿದೆ. ಆದ್ದರಿಂದ ಸರಕಾರ ಕೂಡಲೇ ರೈತರ ನೆರವಿಗೆ ಬರಬೇಕು.ಪ್ರತಿ ಹೇಕ್ಟರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು.ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಬೇಕು.ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.