ಭಾಲ್ಕಿ: ನೆಮ್ಮದಿಯ ಬದುಕಿಗೆ ಶರಣರ ವಚನಗಳು ಸದಾಕಾಲ ದಾರಿದೀಪಗಳಂತಿವೆ. ಶರಣರ ಸಂಗದಲ್ಲಿ ಇದ್ದು ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು. ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಜರುಗಿದ ಮಾಸಿಕ ಶಿವಾನುಭವಗೋಷ್ಠಿಯ ದಿವ್ಯ ಸಾನಿಧ್ಯವಹಿಸಿ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಗಂಗಾಂಬಿಕೆ ಅವರ ಪಾತ್ರ ಐತಿಹಾಸಿಕ ಮಹತ್ವ ಪಡೆದಿದೆ ಎಂದರು. ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಬೀದರ ಘಟಕದ ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಹುಟ್ಟು ಮತ್ತು ಸಾವಿನ ನಡುವೆ ಇರುವ ಜೀವನ ಸಮಚಿತ್ತದಿಂದ ಅನುಭವಿಸುತ್ತ ಶಾಂತಿ ಸಮಾಧಾನ ಪಡೆಯಬೇಕು ಎಂದರು. ಭೌತಶಾಸ್ತ್ರಜ್ಞ ಡಾ.ರಾಜಕುಮಾರ ಹೊಸದೊಡ್ಡೆ ಮತ್ತು ಬೀದರ ಜಿಲ್ಲೆಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾದ ಶ್ರೀದೇವಿ ವಿಜಯಕುಮಾರ ಪಾಟೀಲ ಹಾಗೂ ಸುನೀತಾ ಶಂಭುಲಿಂಗ ಪಾಟೀಲ ಅವರಿಗೆ ಪೂಜ್ಯ ಶ್ರೀಗಳು ಸನ್ಮಾನ ಪತ್ರ ನೀಡಿ ಗೌರವಿಸಿದ್ದರು.
ಡಾ.ಕಲ್ಲಪ್ಪ ಉಪ್ಪೆ, ಬಾಬುರಾವ ಧೂಪೆ, ಶಿವು ಲೋಖಂಡೆ ಮುಂತಾದವರು ಉಪಸ್ಥಿತರಿದ್ದರು. ಯಲ್ಲನಗೌಡ ಬಾಗಲಕೋಟ ಅವರಿಂದ ವಚನ ಗಾಯನ ನಡೆಯಿತು. ವೀರಣ್ಣ ಕುಂಬಾರ ಸ್ವಾಗತಿಸಿ ನಿರೂಪಿಸಿದರು. ಶಾಂತಯ್ಯ ಸ್ವಾಮಿ ವಂದಿಸಿದರು.