ಭಾಲ್ಕಿ: ಇತ್ತೀಚೆಗೆ ಲಿಂಗೈಕ್ಯರಾದ ಬಾ.ನಾ. ಸೋಲಾಪೂರೆ ಅವರು ಕಲ್ಯಾಣ ಕರ್ನಾಟಕ ಭಾಗದ ಶ್ರೇಷ್ಠ ಚಿಂತಕ ಹಾಗೂ ಸಾಹಿತಿ ಎನಿಸಿದ್ದರು. ಕಮಲನಗರದ ಬಡತನ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ತಾಯಿಯ ಆಶ್ರಯದಲ್ಲಿ ಬೆಳೆದರು. ಭಾಲ್ಕಿಯ ಹಿರೇಮಠ ಸಂಸ್ಥಾನದ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಇದ್ದು ಬಿ.ಎ. ಪದವಿ ಪಡೆದು, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಆಕಾಶವಾಣಿ ಗುಲಬರ್ಗಾ ನಿಲಯ ಮುಖಾಂತರ ಇವರ ಚಿಂತನಗಳು ಪ್ರಸಾರವಾಘಿವೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಕಾರ್ಯಕ್ರಮಗಳಲ್ಲಿ ನಿಷ್ಠೆಯಿಂದ ಭಾಗವಹಿಸುತ್ತಿದ್ದರು. ಬಸವಾದಿ ಶರಣರ ವಚನ ಸಾಹಿತ್ಯ ಅಧ್ಯಯನ ನಿರಂತರ ಮಾಡುತ್ತಿದ್ದರು ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಜರುಗಿದ ಲಿಂ.ಬಾ.ನಾ. ಸೋಲಾಪೂರೆ ಅವರಿಗೆ ನುಡಿ ನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪೂಜ್ಯ ಶ್ರೀಗಳು ಆಶೀರ್ವನಗೈದರು. ಪೂಜ್ಯ ಗುರುಬಸವ ಪಟ್ಟದ್ದೇವರು ತಮ್ಮ ಶಾಲಾ ಶಿಕ್ಷಣದ ಸಮಯದಲ್ಲಿ ಬಾ.ನಾ.ಸೋಲಾಪೂರೆ ಅವರಿಂದ ದೊರೆತ ಸಹಕಾರ ನೆನಪಿಸಿ ನುಡಿ ನಮನ ಸಲ್ಲಿಸಿದರು.
ಶರಣ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾ ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಗಣ್ಯರಾದ ಅಶೋಕ ಲೋಖಂಡೆ, ಶಿವರುದ್ರಯ್ಯ ಸ್ವಾಮಿ ಮತ್ತು ವಿಶ್ವಜೀತ ಶಿವು ಲೋಖಂಡೆ ನುಡಿ ನಮನ ಸಲ್ಲಿಸಿದರು.
ಬಾ.ನಾ.ಸೋಲಾಪೂರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪವೃಷ್ಟಿ ಮಾಡಿದ ಬಾಬುರಾವ ಧೂಪೆ, ಬಸವರಾಜ ಮರೆ, ಸಂತೋಷ ಹಡಪದ, ಬಸವಪ್ರಭು ಸೋಲಾಪೂರೆ ಮತ್ತು ಅವರ ಕುಟುಂಬ ಪರಿವಾರದವರು ತಮ್ಮ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು. ಶಾಂತಯ್ಯ ಸ್ವಾಮಿ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಿಸಿದರು.