ಸಮರ್ಪಕ ಪರಿಹಾರಕ್ಕೆ ಒತ್ತಾಯಿಸಿ ಎ.ಐ.ಕ.ಕೆ.ಎಂ.ಎಸ್ ಪ್ರತಿಭಟನೆ

0
41

ಶಹಾಬಾದ: ಹಸಿಬರದಿಂದ ತತ್ತರಿಸಿದ ತಾಲೂಕಿನ ರೈತರಿಗೆ ಸಮರ್ಪಕ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ವತಿಯಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಉಪಸಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಐ.ಕ.ಕೆ.ಎಂ.ಎಸ್ ಜಿಲ್ಲಾಧ್ಯಕ್ಷ ಗಣಪತರಾವ ಮಾನೆ, ರಾಜ್ಯದೆಲ್ಲೆಡೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ತತ್ತರಿಸಿಹೋಗಿದೆ. ಅದರಲ್ಲಿಯೂ ಮುಖ್ಯವಾಗಿ ಗ್ರಾಮೀಣ ಜನತೆಯ ಜೀವನವು ನಲುಗಿಹೋಗಿದೆ. ವರದಿಗಳ ಪ್ರಕಾರ ಅಕ್ಟೋಬರ್ ಒಂದೇ ತಿಂಗಳಲ್ಲಿ ಮಳೆಗೆ 13 ಜನ ಬಲಿಯಾಗಿದ್ದಾರೆ. 28 ಜಾನುವಾರುಗಳು ಸಾವನ್ನಪ್ಪಿವೆ. 3,309 ಮನೆಗಳಿಗೆ ಹಾನಿಯಾಗಿದೆ. ಈ ಎಲ್ಲಾ ಹಾನಿಗಳು ಮಳೆಗಾಲದ ಆರಂಭದಿಂದ ಪರಿಗಣಿಸಿದರೆ ಇಲ್ಲಿಯವರೆಗೆ ನೂರಾರು ಜನರು ಬಲಿಯಾಗಿದ್ದು ಕೋಟ್ಯಾಂತರ ರೂಪಾಯಿ ಜನರ ಆಸ್ತಿಪಾಸ್ತಿ ನಷ್ಟವಾಗಿದೆ. ಅಲ್ಲದೇ ಸಾಕಷ್ಟು ಬೆಳೆಹಾನಿ ಸಂಭವಿಸಿದೆ.

Contact Your\'s Advertisement; 9902492681

ಬೆಳೆನಷ್ಟವಾಗಿ ಹಾಹಾಕಾರ ಉಂಟಾಗುತ್ತಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಸರ್ಕಾರವು ಯುದ್ದೋಪಾಧಿಯಲ್ಲಿ ಪರಿಹಾರಕಾರ್ಯವನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಆರೋಪಿಸಿದರು. ಕೇವಲ ಬಾಯಿಮಾತಿಗೆ ಸರ್ಕಾರವು ‘ಸಂತ್ರಸ್ಥ ಜನರೊಂದಿಗಿದ್ದೇವೆ’ ಎಂದು ಹೇಳುತ್ತಾ ಕೇವಲ ಕಾಲಹರಣ ಮಾಡುತ್ತಿದೆ. ಪತ್ರಿಕಾ ವರದಿಗಳು ಮತ್ತು ಜಾಹೀರಾತುಗಳಲ್ಲಿ ಮಾತ್ರ ಪರಿಹಾರ ಕಾರ್ಯಗಳನ್ನು ನೋಡುವಂತಾಗಿದೆ. ಆದರೆ ಇಲ್ಲಿಯವರೆಗೂ ನಷ್ಟವಾಗಿರುವ ಅಪಾರ ಪ್ರಮಾಣದ ಬೆಳೆಗಳು, ಭೂಮಿ ಮತ್ತು ಗುಡಿಸಲುಗಳಲ್ಲಿ ಆಗಿರುವ ಆಹಾರಧಾನ್ಯಗಳ ನಷ್ಟದ ಸಮೀಕ್ಷೆಯು ಸಮರ್ಪವಾಗಿ ನಡೆದಿಲ್ಲ.

ಪರಿಸ್ಥಿತಿ ಹೀಗಿರುವಾಗ ಬೆಳೆನಷ್ಟದ ಸಮೀಕ್ಷೆಗೆ ರೈತರು ತಮ್ಮ ಹೊಲಗಳಿಂದ ಜಿಪಿಎಸ್ ಫೋಟೋ ದಾಖಲಿಸಬೇಕೆಂದು ಸರ್ಕಾರವು ನಿರ್ದೇಶನ ನೀಡಿರುವುದು ರೈತರಿಗೆ ಮಾಡಿದ ಅಪಹಾಸ್ಯವಾಗಿದೆ. ಜೀವನ ನಡೆಸುವುದೇ ಕಷ್ಟವಾಗಿರುವಾಗ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ರೈತರು ಸ್ಮಾರ್ಟ್ ಫೋನ್‍ಗಳನ್ನು ಕೊಂಡುಕೊಳ್ಳಲು ಸಾಧ್ಯವೇ ಇಲ್ಲ. ಈ ಕೆಲಸಕ್ಕೆ ರೈತರನ್ನು ತೊಡಗಿಸಿಕೊಳ್ಳದೆ ಸರ್ಕಾರವೇ ನೇರವಾಗಿ ಈ ಕೆಲಸವನ್ನು ನಿರ್ವಹಿಸಿ ಯಾವ ಒಬ್ಬ ರೈತನೂ ವಂಚಿತನಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಂಘದ ಸ್ಥಳೀಯ ಕಾರ್ಯದರ್ಶಿಗಳಾದ ರಾಜೇಂದ್ರ ಅತನೂರ ಮಾತನಾಡಿದರು. ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ, ಸಂಘಟನೆಯ ನೀಲಕಂಠ ಹುಲಿ, ನಿಂಗಣ್ಣ ಹೊನಗುಂಟಿ, ಚಂದ್ರು ಹೊನಗುಂಟಿ, ಬಸಣ್ಣರೆಡ್ಡಿ ತೊನಸಿನಹಳ್ಳಿ, ಮಲ್ಲಣ್ಣಗೌಡ ತೊನಸಿನಹಳ್ಳಿ, ಅಶೋಕ ತೊನಸಿನಹಳ್ಳಿ, ಸುಗಣಗೌಡ ತರನಳ್ಳಿ, ಶಂಕರ ತರನಳ್ಳಿ, ಸೇರಿದಂತೆ ಹಲವರು ರೈತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here