ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರವು ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ವಿಭಾಗೀಯ ಕೇಂದ್ರ ಸ್ಥಾನವಾದ ಕಲಬುರಗಿಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾರಸ್ವತ ಲೋಕಕ್ಕೆ ಮೊಟ್ಟ ಮೊದಲ ಗ್ರಂಥ ಕೊಟ್ಟಿದ ನೆಲ ಕಲಬುರಗಿ ಆಗಿದೆ. ಹೀಗಾಗಿ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಅನೇಕ ಸಾಹಿತ್ಯ ದಿಗ್ಗಜ್ಜರು ಇದ್ದಾರೆ. ಆದರೆ ಪ್ರಶಸ್ತಿ ಆಯ್ಕೆಯಲ್ಲಿ ಎಡವಿದ್ದು ಈ ಭಾಗದ ಕವಿ ಸಾಹಿತಿಗಳಿಗೆ ತೀವ್ರ ಅಸಮಾಧಾನ ಆಗಿದೆ.
ಕಲಬುರಗಿಯ ರಂಗಭೂಮಿ ಕ್ಷೇತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಸಮಾಧಾನ ತಂದಿದೆ. ಆದರೆ, ಕಲಬುರಗಿ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಲೇಖಕರಾದ ರಾಮಕೃಷ್ಣ ಮರಾಠೆ ಅವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅವರು ಮೂಲತಃ ವಿಜಯಪುರದವರು. ಅನೇಕ ವರ್ಷಗಳಿಂದ ಬೆಳಗಾವಿಯಲ್ಲಿದ್ದಾರೆ.
ಅವರನ್ನು ಬೆಳಗಾವಿ ಜಿಲ್ಲೆಯ ಪ್ರತಿನಿಧಿಸುವಂತೆ ಆಯ್ಕೆ ಮಾಡಿದ್ದರೆ ಸರಿಯಲ್ಲವೇ ? ಆದರ, ಈ ಭಾಗದ ಕಲ್ಯಾಣ ಮಾಡುವ ಬಗ್ಗೆ ಹೇಳಿಕೆ ನೀಡುವ ಪ್ರಭುತ್ವವು, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ, ವೈದ್ಯಕೀಯ ಮತ್ತು ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳನ್ನು ಪರಿಗಣಿಸಿಲ್ಲ. ಕಲಬುರಗಿ ಜಿಲ್ಲೆಗೆ ಕೇವಲ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಪ್ರಭುತ್ವದ ಗಮನಕ್ಕೆ ಇಲ್ಲಿಯ ಸಾಹಿತ್ಯ ಕ್ಷೇತ್ರ ಸೇರಿದಂತೆ ಯಾವೊಂದು ಕ್ಷೇತ್ರ ಗಣನೆಗೆ ಬಾರದಿರುವುದು ಬೇಸರ ತಂದಿದೆ ಎಂದು ಸಾಹಿತಿ- ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.