ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ 2,000 ಶಾಲಾ ಕೊಠಡಿಗಳನ್ನು ಮಂಜೂರು ಮಾಡಲಾಗಿದ್ದು, ಒಂದು ಕ್ಷೇತ್ರದಲ್ಲಿ 40 ರಿಂದ 50 ಶಾಲಾ ಕೊಠಡಿ ನಿರ್ಮಾಣ ಮಾಡಲಾಗುವುದು. ಈ ವರ್ಷ ಒಟ್ಟು 7600 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಮಡಿಯಾಳ ತಾಂಡಾದಲ್ಲಿ ಸೋಮವಾರ ವಿವೇಕ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷ 7600 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಪ್ರಾಥಮಿಕ/ಪ್ರೌಢ ಶಾಲಾ ಕೊಠಡಿಗಳ ಕೊರತೆ ನೀಗಿಸಲಾಗುತ್ತಿದ್ದು, ಮುಂದಿನ ಅವಧಿಗೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಮುಂದಿನ ವರ್ಷ 8,000 ಕೊಠಡಿಗಳ ನಿರ್ಮಾಣ ಗುರಿ ಮುಟ್ಟುತ್ತೇವೆ ಎಂದರು.
ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮಕ್ಕಳಿಗೂ ಶಿಕ್ಷಣ ಸಿಗುವ ಕಾರ್ಯ ಮಾಡಲಾಗುತ್ತಿದ್ದು, ನಾಡು ಕಟ್ಟೊದು ಶಿಕ್ಷಣದಿಂದ ಮಾತ್ರ ಸಾಧ್ಯ, ಸಾಧನೆ ಮಾಡುವ ಛಲ ನಮ್ಮ ಹೆಣ್ಣುಮಕ್ಕಳಿಗೆ ಇದೆ. ಮಕ್ಕಳ ಪ್ರತಿಭೆ ಅರಳಿದಾಗ ನಾಡು ಕಟ್ಟೊಕೆ ದೊಡ್ಡ ಶಕ್ತಿ ದೊರೆಯಲಿದೆ. 30 ಸಾವಿರ ಕೋಟಿ ರೂ. ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ, ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ, ಶಾಸಕರಾದ ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ ರೇವೂರ, ಶಶೀಲ್ ನಮೋಶಿ ಇತರರಿದ್ದರು.
ಮಕ್ಕಳ ದಿನಾಚರಣೆ ನಿಮಿತ್ತ ನೆರೆದಿದ್ದ ಕೆಲ ಮಕ್ಕಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಮತ್ತಿತರರು ಸಿಹಿ ತಿನಿಸಿದರು. ಶಾಲಾ ಸಮವಸ್ತ್ರ ಧರಿಸಿದ ಮಕ್ಕಳು ಸಂಭ್ರಮಿಸಿದರು.