ಕಲಬುರಗಿ: ಇಂಡಿಯನ್ ಅರ್ಥೋಪೆಡಿಕ್ ಅಸೋಸಿಯೇಷನ್ ವತಿಯಿಂದ ಕಳೆದೊಂದು ವಾರದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡು ಬರುತ್ತಿರುವ ರಾಷ್ಟ್ರೀಯ ಮೂಳೆ ಮತ್ತು ಕೀಳುಗಳ ದಿನಾಚರಣೆಗೆ ಗುರುವಾರ ಹೊರವಲಯದ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ. ಕ್ಯಾಂಪ್ ನಲ್ಲಿ ಅದ್ಧೂರಿಯಾಗಿ ತೆರೆ ಕಂಡಿತು.
ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ಎಸ್.ಆರ್. ಪಿ.ಕಮಾಂಡೆಂಟ್ ಬಸವರಾಜ ಜಿಳ್ಳೆ, ಆರೋಗ್ಯ ಒಂದಿದ್ದರೆ ಎಲ್ಲ ಭಾಗ್ಯನೂ ನಮ್ಮದೇ ಎಂಬ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ನಾವು ಇಂದು ಊಟಕ್ಕಿಂತ ಔಷಧಿನೇ ಜಾಸ್ತಿ ಸೇವಿಸುತ್ತಿದ್ದೇವೆ. ಹಾಗಾಗಿ, ನಾವು ಮೊದಲು ನಮ್ಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ಸಲಹೆ ನೀಡಿದ ಅವರು, ಗಟ್ಟಿ ದೇಹ ಇಟ್ಟುಕೊಂಡರೆ, ಆರೋಗ್ಯವೂ ಸದೃಢವಾಗಿಟ್ಟುಕೊಳ್ಳಬಹುದೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಡಿಯನ್ ಅರ್ಥೋಪೆಡಿಕ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ.ಎಸ್.ಬಿ.ಕಾಮರೆಡ್ಡಿ, ನಮ್ಮ ದೇಹದಲ್ಲಿರುವ ಪ್ರತಿಯೊಂದು ಭಾಗವೂ ಪ್ರಮುಖವಾಗಿರುತ್ತವೆ. ಅದರಲ್ಲೂ ಮೂಳೆ ಮತ್ತು ಕೀಳುಗಳ ರಕ್ಷಣೆಗೆ ನಾವು ಆದ್ಯತೆ ನೀಡಬೇಕಾಗಿರುವುದು ಇಂದು ಅವಶ್ಯಕವಾಗಿದೆ. ಆರೋಗ್ಯದ ರಕ್ಷಣೆಗೆ ನಾವು ಮುಂದಾದರೆ ಕಡಿಮೆ ಆಗುತ್ತಿರುವ ನಮ್ಮ ಆಯುಷ್ಯ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ಮಕ್ಕಳ ನರಗೋಗ ತಜ್ಞೆ ಹಾಗೂ ಸಂಗಮೇಶ್ಚರ ಆಸ್ಪತ್ರೆಯ ಅಧೀಕ್ಷಕಿ ಡಾ.ಅರುಂಧತಿ ಪಾಟೀಲ ಮಾತನಾಡಿ, ಆರೋಗ್ಯವಂತನಾಗಬೇಕಾದರೆ ಆಹಾರ ಸೇವನೆ ಮಿತವಾಗಿರಬೇಕು, ಇಂದಿನ ಆಡಂಬರದ ಜೀವನ ಶೈಲಿಯಿಂದ ಹೊರಬರಬೇಕು, ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು. ಉತ್ತಮ ಆರೋಗ್ಯಕ್ಕೆ ಈ ಮೂರು ಅಂಶಗಳು ಮುಖ್ಯ ಎಂದು ಹೇಳಿದ ಅವರು, ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿ ಎಂಥ ಆಹಾರವನ್ನು ಸೇವಿಸಬೇಕೆಂಬ ಅನೇಕ ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಮೂಳೆ ರೋಗ ತಜ್ಞ ಆನಂದ ಗಾರಂಪಳ್ಳಿ, ಡಾ.ಮಾರ್ಥಂಡ ಕುಲಕರ್ಣಿ, ಡಾ.ಸದಾಶಿವ ಜಿಡಗೆಕರ್, ಅರ್ಥೋಪೆಡಿಕ್ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಅಮೀತ್ ಪವಾರ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಿಕ್ಷಣ ಇಲಾಖೆಯ ಡಾ.ರಾಜಕುಮಾರ ಪಾಟೀಲ, ಪ್ರಮುಖರಾದ ನೀಲಾಂಬಿಕಾ ಚೌಕಿಮಠ, ಸಹಾಯಕ ಕಮಾಂಡೆಂಟಗಳಾದ ಗುರುನಾಥ, ಚನ್ನಬಸವ ಅಮರಾವತಿ, ನಿಸಾರ್ ಅಹ್ಮದ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ನಂತರ ಆರೋಗ್ಯ ಕುರಿತಾದ ಹಲವು ವಿಚಾರಗಳ ಬಗ್ಗೆ ಪೊಲೀಸ್ ಅವರೊಂದಿಗೆ ಮುಕ್ತ ಸಂವಾದ ನಡೆಯಿತು.