ಸುರಪುರ:ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಸಾರ್ವಜನಿಕರ ಆಹ್ವಾಲು ಸ್ವೀಕಾರ ಕಾರ್ಯಕ್ರಮ ನಡೆಸಿದರು.ಪ್ರತಿ ಮಂಗಳವಾರಕ್ಕೊಮ್ಮೆ ಜಿಲ್ಲೆಯ ಒಂದು ತಾಲೂಕಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಭೆಗೆ ಆಗಮಿಸಿ ತಮ್ಮ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಂಗಿಹಾಳ ಗ್ರಾಮ ಘಟಕದ ವತಿಯಿಂದ ಮನವಿ ಸಲ್ಲಿಸಿ ಬೆಳೆ ಪರಿಹಾರ ವಿತರಣೆಗಾಗಿ ತಂತ್ರಾಂಶದಲ್ಲಿ ಸೇರಿಸುವಾಗ ಭತ್ತದ ಬದಲು ಹತ್ತಿ ಬೆಳೆ ಎಂದು ನಮೂದಿಸಿ ಪರಿಹಾರದ ಹಣದಲ್ಲಿ ವಂಚಿಸಿದ್ದಾರೆ ಎಂದು ಆರೋಪಿಸಿ ಮನವಿ ಸಲ್ಲಿಸಿದರು.ಕೂಡಲೇ ಇದರ ಕುರಿತು ಸಮಗ್ರ ಮಾಹಿತಿಯ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಹಸೀಲ್ದಾರರಿಗೆ ಸೂಚಿಸಿದರು.
ವಾಡಿ ಗದಗ ರೈಲ್ವೆ ಮಾರ್ಗಕ್ಕಾಗಿ ಸ್ವಾದೀನ ಪಡಿಸಿಕೊಂಡಿರುವ ಜಮೀನುಗಳಲ್ಲಿ ನಮ್ಮ ಎನ್.ಎ ಪ್ಲಾಟ್‍ಗಳ ಮೂಲಕ ಕಾಮಗಾರಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.ಆದರೆ ನಮಗೆ ಪರಿಹಾರ ಬಂದಿಲ್ಲ,ನಮ್ಮ ಪ್ಲಾಟ್‍ಗಳು ಕಳೆದುಕೊಂಡಲ್ಲಿ ಪರಿಹಾರ ನೀಡಬೇಕು ಇಲ್ಲವಾದಲ್ಲಿ ನಮ್ಮ ಪ್ಲಾಟುಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ನಿವೃತ್ತ ಎಸ್ಪಿ ಸಿ.ಎನ್ ಭಂಡಾರೆ ಮನವಿ ಸಲ್ಲಿಸಿ ರುಕ್ಮಾಪುರ ಗ್ರಾಮದ ಬಳಿಯಲ್ಲಿನ ಬ್ರಿಟೀಷ ಅಧಿಕಾರಿ ಜಾರ್ಜ್ ನ್ಯೂಬೆರಿಯನ್ನು ಸೋಲಿಸಿ ಹತ್ಯೆ ಮಾಡಿದ ಐತಿಹಾಸಿಕ ಸ್ಥಳವನ್ನು ಕಂದಾಯ ಇಲಾಖೆ ಅಡಿಯಲ್ಲಿ ಅಭೀವೃಧ್ಧಿ ಪಡಿಸುವಂತೆ ಮನವಿ ಸಲ್ಲಿಸಿದರು.
ದೇವರಗೋನಾಲ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬಾ ಇಕ್ಕಟ್ಟಾಗಿದ್ದು ಮಕ್ಕಳ ಓದಿಗೆ ತೊಂದರೆಯಾಗಿದೆ.ಆದ್ದರಿಂದ ಈ ಶಾಲೆಯ ಬಳಿಯಲ್ಲಿರುವ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯ ಹಳೆಯ ಎರಡು ಕಟ್ಟಡಗಳಿದ್ದು ಅವು ಶಿಥಿಲಾವಸ್ಥೆಯಲ್ಲಿವೆ,ಆದ್ದರಿಂದ ಈ ಹಳೆಯ ಕಟ್ಟಡಗಳ ತೆರವುಗೊಳಿಸಿ ಈ ಜಾಗದಲ್ಲಿ ಹೊಸದಾಗಿ ಶಾಲೆ ನಿರ್ಮಾಣಕ್ಕೆ ಸ್ಥಳ ಒದಗಿಸಿಕೊಡುವಂತೆ ದೇವರಗೋನಾಲ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಒಕ್ಕೂಟ ದಿಂದ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿ,ತಾಲೂಕಿನಲ್ಲಿಯ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಕೂಲಿಕಾರರ ಸಮಸ್ಯೆ ಪರಿಹಾರ,ಬೊಮ್ಮನಹಳ್ಳಿ ಟಿ.ಗ್ರಾಮದಲ್ಲಿನ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನ್ಯಾಯಬೆಲೆ ಅಂಗಡಿಗಳ ಸಮಸ್ಯೆ ನಿವಾರಣೆ,ರೈತರ ಜಮೀನು ಸಮಯಕ್ಕೆ ಸರಿಯಾಗಿ ಸರ್ವೇ ಮಾಡಿಕೊಡುತ್ತಿಲ್ಲ,ಇದನ್ನು ಸರಿಪಡಿಸಲು ಒತ್ತಾಯಿಸಿ,ಸುರಪುರ ನಗರದಲ್ಲಿನಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಾಗೂ ತಾಲೂಕಿನಲ್ಲಿಯ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ತಳವಾರ ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವಂತೆ ವಿನಂತಿಸಿ ಅನೇಕ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅನೇಕ ಜನ ತಳವಾರ ಪರಿವಾರ ಸಮುದಾಯದವರು ಸಲ್ಲಿಸಿದ್ದ ಅರ್ಜಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಕೊಡಿಸಿದರು.ಈ ಸಂದರ್ಭದಲ್ಲಿ ತಳವಾರ ಪರಿವಾರ ಸಮುದಾಯದ ಅನೇಕ ಮುಖಂಡರು ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ನಂತರ ತಹಸೀಲ್ದಾರ್ ಕಚೇರಿ ಮುಂದೆ ಸಂಭ್ರಮಾಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.