ಶಹಾಬಾದ :ಗರ್ಭಿಣೀಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ತಮ್ಮ ಆರೋಗ್ಯ ಮತ್ತು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಮುಗುಳನಾಗಾವನ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.
ಅವರು ಮುಗುಳನಾಗಾವ ಮಠದಲ್ಲಿ ಭಂಕೂರ ಗ್ರಾಮದ ಜ್ಞಾನ ವಿಕಾಸ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಲಾದ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೊಡಬೇಕಿದೆ. ಗರ್ಭಿಣಿಯರು ಧನಾತ್ಮಕವಾಗಿ,ಉತ್ತಮ ಆಲೋಚನೆ ಹೊಂದಬೇಕು. ಶಾಂತಿಯಿಂದ ಧ್ಯಾನ,ದೇವರ ಸ್ಮರಣೆ ಹೇಳಿಕೊಂಡಲ್ಲಿ ಜನಿಸುವ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ತಾಯಿಯ ಮನಸ್ಸು ಚಿಂತೆ,ದುಗುಡ, ದುಃಖ, ಹಿಂಸೆಯಿಂದ ಕೂಡಿದ್ದರೆ ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿರುವಾಗ ತಾಯಂದಿರ ವಿಚಾರಧಾರೆ ಉತ್ತಮವಾಗಿರಬೇಕು ಎಂದರು.
ತಾ. ಪಂ. ಮಾಜಿ ಸದಸ್ಯ ನಾಮದೇವ ರಾಠೋಡ ಮಾತನಾಡಿ,ಗರ್ಭಿಣಿಯರು ಹೆಚ್ಚಿನ ಪೌಷ್ಠಿಕವಾದ ಆಹಾರವನ್ನು ಸೇವಿಸುವ ಮೂಲಕ ಹುಟ್ಟುವ ಮಗುವಿಗೆ ಆಪೌಷ್ಠಿಕತೆ ಹೋಗಲಾಡಿಸಲು ಸಾಧ್ಯವಾಗುವುದು. ವೈಧ್ಯರು ನೀಡಿದ ಔಷಧಿಯನ್ನು ಸಕಾಲದಲ್ಲಿ ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯದ ಕಾಳಜಿಮಾಡುವುದು ಅಗತ್ಯವಾಗಿ ಆಗಬೇಕಿದೆ. ಸೊಪ್ಪು, ತರಕಾರಿ, ಹಣ್ಣು ,ಹೆಸರಕಾಳು ತಿನ್ನುವುದು ರೂಢಿ ಮಾಡಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ನೇರವೇರಿಸಲಾಯಿತು. ನಾಮದೇವ ರಾಠೋಡ ಮತ್ತು ಪ್ರಕಾಶ ರಾಠೋಡ ಗರ್ಭಿಣಿ ಮಹಿಳೆಯವರಿಗೆ ಒಟ್ಟು 48 ಕಿಟ್ ನೀಡಿದರು. ಮುಖ್ಯ ಅತಿಥಿಗಳಾಗಿ ರಾಜಶೇಖರ ಪಾಟೀಲ ಅಪ್ಪಾಜಿ, ಗ್ರಾ. ಪಂ. ಅಧ್ಯಕ್ಷ ಮಲ್ಲಮ್ಮ ಸುಬೇದಾರ, ಉಪಾಧ್ಯಕ್ಷೆ ಕಮಲಾಬಾಯಿ ರಾಠೋಡ, ರಮೇಶ ಕಂಠಿ, ಭೀಮರಾವ ವಾಲಿಕಾರ, ಪಿಡಿಒ ಕವಿತಾ ಬುಕ್ಕಿ ವೇದಿಕೆ ಮೇಲೆ ಇದ್ದರು. ಗ್ರಾ. ಪಂ ಸದಸ್ಯರು, ಗುರು ಸಾಹುಕಾರ ಗೋಳಾ, ರೋಹಿತ ಭೋರಿ, ಧನ್ನು ರಾಠೋಡ, ಹೀರಾಸಿಂಗ ರಾಠೋಡ, ಶ್ರೀಮತಿ ಗೋದುಬಾಯಿ ರಾಠೋಡ, ಮಾಲಾಶ್ರೀ ದೊಡ್ಡಮನಿ ಉಪಸ್ಥಿತರಿದ್ದು. ಸಂಸ್ಥೆಯ ವಿರೇಂದ್ರ ರಾಠೋಡ, ಉತ್ತಮ ಚೌಹಾಣ, ನಾಗೇಂದ್ರ ಚೇಂಗಟ ಇದ್ದರು.
ಅಂಗನವಾಡಿ ಶಿಕ್ಷಕಿ ನಾಗಮ್ಮ ಪ್ರಾಸ್ತಾವಿಕ ಮಾತನಾಡಿದರು, ಚಂದು ಜಾಧವ ನಿರೂಪಿಸಿದರು. ಭಗವಂತ ವಂದಿಸಿದರು.