ಕಲಬುರಗಿ: ನೆಟೆರೋಗದಿಂದಾದ ತೊಗರಿಬೆಳೆ ನಾಶ ಹೆಚ್ಚುವರಿ ಪರಿಹಾರ ನೀಡುವಂತೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಟೆರೋಗದಿಂದ ತೊಗರಿಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ರೈತರು ಕಂಗಾಲಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರು. ರೈತರಿಗೆ ನ್ಯಾಯ ಒದಗಿಸಿಕೊಡಬೇಕು, ಮತ್ತು ಸರ್ಕಾರದಿಂದ ಪರಿಹಾರ ಘೋಷಿಸಬೇಕು ಎಂದು ನಮ್ಮ ಕಾಂಗ್ರೆಸ್ ಪಕ್ಷದಿಂದ ಸತತ ಹೋರಾಟ, ಮುಖ್ಯಮಂತ್ರಿಗಳಿಗೆ ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ ನಂತರ ಈಗ ಸರ್ಕಾರ ನಿದ್ದೆಯಿಂದ ಎದ್ದು ಹೆಕ್ಟೇರ್ ಗೆ 10,000 ಪರಿಹಾರವನ್ನು ಸರ್ಕಾರ ಘೋಷಿಸಿದೆ. ಇದು ರೈತರ ಬೇಡಿಕೆಗಿಂತ ಕಡಿಮೆ ಹಣವಾಗಿದ್ದರೂ, ಸಂಕಷ್ಟದಲ್ಲಿರುವ ರೈತರಿಗೆ ಅಲ್ಪ ಸಹಾಯ ನೀಡಲಿದೆ.
ನೆಟೆ ರೋಗದಿಂದ ತೊಗರಿ ಬೆಳೆ ನಷ್ಟವಾದಾಗ ಡಿಸೆಂಬರ್ 12 ರಂದು ಹೊಲಗಳಿಗೆ ಭೇಟಿ ನೀಡಿ ನೆಟೆರೋಗದ ಬಗ್ಗೆ ಪರಿಶೀಲನೆ ನಡೆಸಿದ್ದೆ. ಡಿಸೆಂಬರ್ 14 ರಂದು ಕಲಬುರಗಿ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಂಡು ರೈತರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆ. ಡಿಸೆಂಬರ್ 14 ರಂದು ಪತ್ರಿಕಾಗೋಷ್ಠಿ ನಡೆಸಿ ನೆಟೆರೋಗದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ.ಡಿಸೆಂಬರ್ 14 ಕೃಷಿ ಸಚಿವರಿಗೆ ಪತ್ರ ಬರೆಯುವ ಮೂಲಕ ಆಗ್ರಹಿಸಿದ್ದಾರೆ.
ಡಿಸೆಂಬರ್ 22 ರಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಸಿದ್ದೆ. ಡಿಸೆಂಬರ್ 27 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರೈತರ ನೋವಿಗೆ ಸ್ಪಂದಿಸಿ ಜೊತೆಗೆ ಪ್ರತಿ ಎಕರೆ ಪ್ರದೇಶಕ್ಕೆ 25,000 ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದೆ. ಇಷ್ಟೆಲ್ಲಾ ಪ್ರಯತ್ನ ಪಟ್ಟ ನಂತರ, 61ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ಈ ರೈತ ವಿರೋಧಿ ಸರ್ಕಾರ ಇದೀಗ ಎಚ್ಚೆತ್ತುಕೊಂಡು ಅಲ್ಪಪರಿಹಾರವನ್ನು ಘೋಷಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟಾದರೂ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವ ಅವರು ಪ್ರತಿ ಎಕರೆಗೆ ಕನಿಷ್ಠ 25,000 ನಷ್ಟ ಪರಿಹಾರ ಬಿಡುಗಡೆ ಮಾಡಲೇಬೇಕು ಎಂದೂ ಈ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.