ಬೀದರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾನುವಾರುಗಳ ರಕ್ಷಣೆಗಾಗಿ ಜನವರಿ 31ರ ಬೆಳಗ್ಗೆ 11 ಗಂಟೆಗೆ ಬೀದರ ನೆಹರೂ ಕ್ರೀಡಾಂಗಣದಲ್ಲಿ 68 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, 2022-23ನೇ ಸಾಲಿನ ಕೇಂದ್ರ ಸರ್ಕಾರದ ಅನುದಾನದಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಈ ಸಂಚಾರಿ ಆಂಬ್ಯುಲೆನ್ಸ್ ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಾನು ಪಶು ಸಂಗೋಪನೆ ಇಲಾಖೆ ಸಚಿವನಾದ ನಂತರದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅಮೃತ ಹಸ್ತದಿಂದ 15ಪಶು ಚಿಕಿತ್ಸಾ ವಾಹನಗಳನ್ನು ಪಶು ಸಂಜೀವಿನಿ ಹೆಸರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ಇವುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದನ್ನು ಗಮನಿಸಿದ ಕೇಂದ್ರ ಸರಕಾರವು ಪಶು ಸಂಜೀವಿನಿ ಕಾರ್ಯಕ್ರಮವನ್ನು ಪ್ರಶಂಸಿಸಿ ರಾಜ್ಯಕ್ಕೆ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಒದಗಿಸಿದೆ. ಇದರ ಪೈಕಿ 70 ವಾಹನಗಳನ್ನು ಬೆಂಗಳೂರು ವಿಭಾಗಕ್ಕೆ ಮತ್ತು 82 ವಾಹನಗಳನ್ನು ಬೆಳಗಾವಿ ವಿಭಾಗಕ್ಕೆ ನೀಡಲಾಗಿದೆ. ಇದೀಗ ಕಲ್ಯಾಣ ಕರ್ನಾಟಕ ವಿಭಾಗಕ್ಕೆ 68 ವಾಹನಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
‘ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿಗಾ ವಹಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಾನುವಾರುಗಳಿಗಾಗಿ ಕಾಲ್ ಸೆಂಟರ್ ತೆರೆಯಲಾಗಿದೆ. ಜಾನುವಾರುಗಳು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಲ್ಲಿ ರೈತರು ಟ್ರೋಲ್ ಫ್ರಿ ಸಂಖ್ಯೆ 1962 ಅಥವಾ 8277100200ಗೆ ಕರೆ ಮಾಡಿದಲ್ಲಿ ತಕ್ಷಣ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ಚಿಕಿತ್ಸಾ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕ ಮತ್ತು ವಾಹನ ಚಾಲಕರು ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ನಾನು ಸಚಿವನಾದ ನಂತರ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಇಲಾಖೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ರೈತಸ್ನೇಹಿಯಾಗಿ ಬದಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ತಂದ ನಂತರ ಹಸುಗಳು ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುವುದು ತಗ್ಗಿದೆ. ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ರಾಷ್ಟ್ರದ ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ(ವಾರ್ ರೂಮ್) ಸ್ಥಾಪನೆ, ಜಿಲ್ಲೆಗೊಂದು ಸರಕಾರಿ ಗೋಶಾಲೆ ನಿರ್ಮಾಣ, ಆತ್ಮ ನಿರ್ಭರ ಗೋಶಾಲೆ, ಪುಣ್ಯಕೋಟಿ ದತ್ತು ಯೋಜನೆ, ಪಶು ಸಂಜೀವಿನಿ ಆಂಬ್ಯುಲೆನ್ಸ್ ಲೋಕಾರ್ಪಣೆ, ಪಶುಗಳ ಆರೋಗ್ಯಕ್ಕೆ ಹೆಚ್ಚಿನ ಒತು ನೀಡಲು ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಪಶು ಸಂಜೀವಿನಿ ಯೋಜನೆಯ ಯಶಸ್ಸಿನ ನಂತರ ರಾಜ್ಯಕ್ಕೆ 275 ಪಶು ಚಿಕಿತ್ಸಾ ವಾಹನಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಕೇಂದ್ರ ಪಶು ಸಂಗೋಪನೆ ಸಚಿವರಾದ ಪರುಷೋತ್ತಮ ರುಪಾಲಾರವರು ಮತ್ತು ಜಾನುವಾರುಗಳ ಹಿತರಕ್ಷಣೆಗೆ ಮತ್ತು ಇಲಾಖೆಯ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಜನವರಿ 31ರ ಬೆಳಗ್ಗೆ 11 ಗಂಟೆಗೆ ಬೀದರ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ಚುನಾಯಿತ ಜನಪ್ರತಿನಿಧಿಗಳು ಆಗಮಿಸಬೇಕು. ರೈತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.