ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಹಾಗೂ ಶ್ರೀ ದಾಮೋದರ ರಘೋಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ದಾಮೋದರ ರಘೋಜಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ. ನಮೋಶಿ ರವರು ನೆರವೇರಿಸಿ, ಮಾತನಾಡುತ್ತ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ರವರ ನಿರ್ದೇಶನದಂತೆ ಜಿಲ್ಲಾ ಹಂತದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಧಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ತಾವು ಗೌರವ ಅದ್ಯಕ್ಷರಾಗಿದ್ದು, ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಸದಸ್ಯರಿದ್ದು, ಸಮಿತಿ ರಚಿಸಿದ ಉದ್ದೇಶ ಎಲ್ಲರೂ ಒಟ್ಟಾಗಿ ಶ್ರಮಿಸಿ ಜಿಲ್ಲೆಯ ಫಲಿತಾಂಶವನ್ನು ಕ್ರ.ಸಂ. 01 ರಿಂದ 10 ರ ಸ್ಥಾನದಲ್ಲಿ ತರಬೇಕಾಗಿದೆ ಎಂದು ಹೇಳಿದರು. ಶಿಕ್ಷಕರು ಮನಸ್ಸು ಮಾಡಿದರೆ ಸಮಾಜದಲ್ಲಿ ಪರಿವರ್ತನೆ ತರುತ್ತಾರೆ, ತಾವುಗಳು ಮನಸ್ಸು ಮಾಡಬೇಕೆಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧದೊಂದಿಗೆ ಪಾಠ ಬೋಧನೆ ಮಾಡಬೇಕು, ಕೇವಲ ಅಂಕ ಗಳಿಸುವ ದೃಷ್ಠೀಕೋನದಿಂದ ಮಾತ್ರವಲ್ಲದೇ, ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಹಾಗೂ ಪರಿಣಾಮ ಬೀರುವ ರೀತಿಯಲ್ಲಿ ಬೋಧಿಸಿದರೆ ಅವರು ಅದನ್ನು ದೀರ್ಘ ಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಇದರಿಂದ ಮಕ್ಕಳಲ್ಲಿ ಶಾಸ್ವತ ಕಲಿಕೆ ಉಂಟಾಗುತ್ತದೆ.
ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಪಟ್ಟು ಜಿಲ್ಲೆಯ ಫಲಿತಾಂಶ ಸುಧಾರಣೆ ಮಾಡಲು ಶ್ರಮಿಸಬೇಕೆಂದು ಹೇಳಿದರು. ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೀರಣ್ಣ ಬಮನಳ್ಳಿ ಮಾತನಾಡಿ ಪ್ರೌಢ ಶಾಲೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಅಲ್ಲಿ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿದ್ದು, ಪ್ರಾಥಮಿಕ ಶಿಕ್ಷಣ ಬುನಾದಿಯಾಗಿದ್ದು, ಅದನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಕು. ನಂದಿನಿ ರಾಮಚಂದ್ರ ರಘೋಜಿ ಅವರು ಮಾತನಾಡಿ, ಇಂತಹ ಒಂದು ಬುದ್ದಿಜೀವಿಗಳ ಕಾರ್ಯಾಗಾರ ನಡೆಸಲು ನಮ್ಮ ಸಂಸ್ಥೆಯನ್ನಯ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಇಂತಹ ಅವಕಾಶವನ್ನು ಕಲ್ಪಿಸಿದ ಶಿಕ್ಷಣ ಇಲಾಖೆಗೆ ಹಾಗೂ ಶಿಕ್ಷಕರ ಸಂಘಕ್ಕೆ ಧನ್ಯವಾದ ಹೇಳಿದರು. ರಾಮಚಂದ್ರ ದಾಮೋದರ ರಘೋಜಿ ರವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿಗಳಾದ ರಮೇಶ ಜಾನಕಾರ, ಸಂಘದ ಕಾರ್ಯದರ್ಶಿ ಜಮೀಲ್ ಇಮ್ರಾನ್ ಅಹ್ಮದ್, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮಹ್ಮದ್ ಹನೀಫ್, ಸಂತೋಷ ಕುಲಕರ್ಣಿ, ಸೋಮಶೇಖರ ಮಠ, ಮಹ್ಮದ್ ಇಸ್ರಾರ ಪಟೇಲ ಮತ್ತು ಉಸ್ತುವಾರಿ ಸಿ.ವಿ.ಪಾಟೀಲ, ಸುಭಾಷ್ಚಂದ್ರ ಗಾದಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಕಿಣ್ಣಿ ರವರು ಉಪಸ್ಥಿತರಿದ್ದರು, ಶ್ರೀ ದೇವೆಂದ್ರ ಬಿರಾದಾರ ನಿರೂಪಿಸಿದರು.