ಸುರಪುರ: ‘ಸುರಪುರ ವಿಜಯೋತ್ಸವ ಸರ್ಕಾರವೇ ಆಚರಿಸಲಿ ಎಂಬುದಕ್ಕೆ ನನ್ನ ಸಹಮತವಿಲ್ಲ. ಸರ್ಕಾರದ ಅನುದಾನ ಪಡೆದರೆ ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ವಿಜಯೋತ್ಸವ ರಾಜಕೀಯಗೊಳ್ಳುತ್ತದೆ’ ಎಂದು ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ ವಿಭಿನ್ನ ಹೇಳಿಕೆ ನೀಡಿದರು.
ನಗರದ ಖಾಸಗಿ ಹೊಟೆಲ್‍ನಲ್ಲಿ ಬುಧವಾರ ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಮತ್ತು ಓಕುಳಿ ಪ್ರಕಾಶನ ಏರ್ಪಡಿಸಿದ್ದ ‘ಸುರಪುರ ವಿಜಯೋತ್ಸವ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ನಾಡಿನ ಸಂಸ್ಕøತಿ, ಧಾರ್ಮಿಕ ಕೇಂದ್ರಗಳ ರಕ್ಷಣೆ, ಸ್ವಾತಂತ್ರ್ಯಕ್ಕೆ ಸುರಪುರ ಅರಸರ ಕೊಡುಗೆ ಅಪೂರ್ವವಾಗಿದೆ. ಔರಂಗಜೇಬನನ್ನು ಸೋಲಿಸಿ ಹಿಮ್ಮೆಟ್ಟಿಸಿದ ಕಾರಣ ದಕ್ಷಿಣ ಭಾಗದ ದೇಗುಲಗಳು ಸುರಕ್ಷಿತವಾಗಿವೆ’ ಎಂದರು.
‘ಸಾವರ್ಕರ್ ಬರೆದ ಪುಸ್ತಕದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪನಾಯಕರ ಉಲ್ಲೇಖವಿದೆ. ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯ ಮತ್ತು ಸಾಲಾರಜಂಗ್ ಮ್ಯೂಸಿಯಂನಲ್ಲ್ಲಿ ಸುರಪುರ ಇತಿಹಾಸದ ಬಗ್ಗೆ ವಿಪುಲ ಮಾಹಿತಿ ಸಿಗುತ್ತದೆ. ಶಂಶೋಧನಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಶ್ರೇಯಸ್ಸು ಹೊಂದಿದ್ದಾರೆ. ಇದೇ ತಳಹದಿಯ ಮೇಲೆ ಮುಂದೆ 90 ವರ್ಷ ವಿಭಿನ್ನ ಚಳವಳಿಗಳು ನಡೆದು ದೇಶ ಸ್ವಾತಂತ್ರ್ಯ ಹೊಂದಿತು’ ಎಂದು ವಿವರಿಸಿದರು.
‘ಕನ್ನಡ ಸಾಹಿತ್ಯ ಸಂಘದಿಂದ ಸುರಪುರ ಇತಿಹಾಸ ಕುರಿತು ಸಮಗ್ರ ಮಾಹಿತಿಯ ದೊಡ್ಡ ಸಂಪುಟವನ್ನು ಹೊರತರುತ್ತೇವೆ ಎಂದು ಹೇಳಿದ ಹೈಕೋರ್ಟ್ ವಕೀಲ ಜೆ. ಅಗಸ್ಟಿನ್, ಹಳೇ ಪೋಸ್ಟ್ ಆಫೀಸ್ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು, ದೆಹಲಿಯ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪನಾಯಕರ ಭಾವಚಿತ್ರ ಹಾಕಬೇಕು’ ಎಂದು ಆಗ್ರಹಿಸಿದರು.
ಹಳೆ ಆಸ್ಪತ್ರೆಯಲ್ಲಿ ಇರುವ ವಿಜಯಸ್ತಂಭಕ್ಕೆ ಮಾಲಾರ್ಪಣೆ ಮಾಡಿದ ನಂತರವೇ ಎಲ್ಲ ಸರ್ಕಾರಿ ಸಮಾರಂಭಗಳು ಆರಂಭವಾಗಬೇಕೆನ್ನುವ ನಿರ್ಣಯ ತೆಗೆದುಕೊಳ್ಳಬೇಕು. ಎಲ್ಲರೂ ಸೇರಿ ಈಗಿನ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಪುತ್ಥಳಿಯನ್ನು ಇನ್ನಷ್ಟು ಪರಿಪೂರ್ಣವಾಗಿ ಕೆತ್ತಿಸಿ ಸ್ಥಾಪಿಸೋಣ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಹೇಳಿದರು.
ಲೇಖಕ ರಾಜಗೋಪಾಲ ವಿಭೂತಿ ಮಾತನಾಡಿ, ‘ಅವಿಭಿಜಿತ ಸುರಪುರ ತಾಲ್ಲೂಕು ಪ್ರಾಗೈತಿಹಾಸಿಕ ಕೇಂದ್ರವಾಗಿದೆ. ಡಾ. ಪೆದ್ದಯ್ಯ ಅವರಿಗೆ ಈ ಕುರಿತು ನಡೆಸಿದ ಸಂಶೋಧನೆಗೆ ಪದ್ಮಶ್ರೀ ಸೇರಿ ಅನೇಕ ಪುರಸ್ಕಾರಗಳು ಲಭಿಸಿವೆ. ಇನ್ನಷ್ಟು ಇತಿಹಾಸ ಬೆಳಕಿಗೆ ಬರಬೇಕು’ ಎಂದರು.
ಸಾಹಿತಿಗಳಾದ ಸಿದ್ಧರಾಮ ಹೊನ್ಕಲ್, ಮಹ್ಮದ್ ಇಕ್ಬಾಲ್ ರಾಹಿ ಮತ್ತು ರಾಜಾ ಪಿಡ್ಡನಾಯಕ ಪ್ಯಾಪ್ಲಿ ಪ್ರಶ್ನೆಗಳನ್ನು ಸಂದೇಹಗಳನ್ನು ಬಗೆಹರಿಸಿಕೊಂಡರು. ಅಧ್ಯಕ್ಷತೆ ವಹಿಸಿದ್ದ ರಾಜ ವಂಶಸ್ಥ ರಾಜಾ ಲಕ್ಷ್ಮೀನಾರಾಯಣನಾಯಕ, ರಾಜಗೋಪಾಲ ವಿಭೂತಿ ಬರೆದ ‘ಸುರಪುರ ಗಿರಿದುರ್ಗ ದರ್ಶನ’ ಪುಸ್ತಕ ಬಿಡುಗಡೆ ಮಾಡಿದರು.
ಖ್ಯಾತ ಗರುಡಾದ್ರಿ ಚಿತ್ರಕಲಾವಿದ ವಿಜಯ ಹಾಗರಗುಂಡಗಿ ಕಾರ್ಯಕ್ರಮ ಉದ್ಘಾಟಿಸಿದರು. ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಕೃಷ್ಣ ಸುಬೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರೇಶ ಚಿಲ್ಲಾಳ ನಿರೂಪಿಸಿ, ವಂದಿಸಿದರು. ವಿಜಯೋತ್ಸವದಲ್ಲಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
- ರೂ. 5 ಕೋಟಿ ವೆಚ್ಚದಲ್ಲಿ ಸರ್ಕಾರ ಸುರಪುರ ಇತಿಹಾಸದ ಸಮಗ್ರ ದಾಖಲೆಗಳನ್ನು ಪ್ರಕಟಿಸಬೇಕು.
- ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಹೆಸರು ನಾಮಕರಣ ಮಾಡಬೇಕು.
- ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ ರಾಣಿ ಈಶ್ವರಮ್ಮ ಹೆಸರು ಇಡಬೇಕು.
- ರಾಷ್ಟ್ರಮಟ್ಟದ ಸೈನಿಕ ಶಾಲೆಯನ್ನು ಸುರಪುರದಲ್ಲಿ ಆರಂಭಿಸಬೇಕು.
- ಸುರಪುರದ ಐತಿಹಾಸಿಕ ಸ್ಥಳಗಳನ್ನು ರಕ್ಷಿಸಿ, ಜೀರ್ಣೋದ್ಧಾರ ಮಾಡಬೇಕು.
- ಯಾದಗಿರಿಯ ಮುಖ್ಯ ರಸ್ತೆಗೆ ಹುತಾತ್ಮ ಸೇನಾನಿ ಮಹಿಪಾಲಸಿಂಗ್ ರಜಪೂತ್, ಸುರಪುರದ ತರಕಾರಿ ಮಾರುಕಟ್ಟೆಯ ಕಮಾನಿಗೆ ಸೇನಾಧಿಪತಿ ತಜದೀಕ್ ಹುಸೇನ್ ಜಮಾದಾರ ಹೆಸರು ಇಡಬೇಕು.