ಕಲಬುರಗಿ: “ಭೋಗಸ್ ಕಾರ್ಡ ರದ್ದತಿ ಅಭಿಯಾನ” ಆನ್‍ಲೈನ್ ಅಥವಾ ಮೋಬೈಲ್ ಆ್ಯಪ್ ಮೂಲಕ ಪ್ರೀಜ್ ಮಾಡುವಂತೆ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಬಿ. ಪಾಟೀಲ್ ಅವರು ಸಲಹೆ ನೀಡಿದರು.
ಬುಧುವಾರದಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಭೋಗಸ್ ಕಾರ್ಡ್ ರದ್ಧತಿ ಅಭಿಯಾನದ ಆಟೋ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜನವರಿ 25 ರಿಂದ ಫೆಬ್ರುವರಿ 25 ರವರೆ ನಡೆಯುವ ಅಭಿಯಾನಕ್ಕೆ ನಕಲಿ ದಾಖಲಾತಿ ಸೃಷ್ಟಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡುಗಳನ್ನು ರದ್ದುಪಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಮಿಕರಿಗೆ ಮಂಡಳಿಯ ವತಿಯಿಂದ ವಿವಿಧ ಧನ ಸಹಾಯ ಯೋಜನೆಗಳಾದ ಶೈಕ್ಷಣಿಕ, ಮದುವೆಯ, ಹೆರಿಗೆ, ವೈದ್ಯಕೀಯ, ಅಂತ್ಯಸಂಸ್ಕಾರ, ಪಿಂಚಣಿ ಇತರೆ ಸಹಾಯಧನ ನೀಡಲಾಗುತ್ತಿದ್ದು ಇದರ ಸೌಲಭ್ಯ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಾ. ಅವಿನಾಶ ನಾಯ್ಕ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿ ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವುದು ಕಂಡು ಬಂದಿದ್ದು ಅವರುಗಳ ಕಾರ್ಡು ರದ್ದು ಮಾಡಲು ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ರಮೇಶ ಸುಂಬಡ ಅವರು ಮಾತನಾಡಿ, ಈ ಅಭಿಯಾನದ ದಿನಗಳಲ್ಲಿ ನÀಕಲಿ ದಾಖಲಾತಿ ಸೃಷ್ಟಿಸಿ ಗುರುತಿನ ಚೀಟಿ ಪಡೆದಿರುವ ಫಲಾನುಭವಿಗಳು ತಮ್ಮ ಸ್ವ-ಇಚ್ಛೆಯಿಂದ ಮಂಡಳಿ/ಕಛೇರಿಗೆ ತಮ್ಮ ಗುರುತಿನ ಚೀಟಿಗಳನ್ನು ಹಿಂತಿರುಗಿಸಿದಲ್ಲಿ ಮುಂದಿನ ಕ್ರಮವನ್ನು ಕೈಬಿಡಲಾಗುವುದು, ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುಶಾಂತ ಎಮ್. ಚೌಗುಲೆ, ಹಿರಿಯ ಕಾರ್ಮಿಕ ನಿರೀಕ್ಷಕರುಗಳಾದ ರವೀಂದ್ರಕುಮಾರ, ಕೆ.ಎಸ್.ಪ್ರಸನ್ನ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಹಾಜರಿದ್ದರು.