ಕಲಬುರಗಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗೆ ಸಿಎಂ ಚಾಲನೆ

0
26

ಕಲಬುರಗಿ; ರೈಲು, ರಸ್ತೆ, ವಿಮಾನಯಾನ ಸಂಪರ್ಕ ಹೀಗೆ ಅನೇಕ ಮೂಲಸೌಕರ್ಯಗಳನ್ನು ಹೊಂದಿರುವ ಮತ್ತು ಮುಂಬೈ-ಬೆಂಗಳೂರು-ಹೈದ್ರಾಬಾದ ನಗರಗಳಿಗೆ ಕೇಂದ್ರೀತವಾಗಿರುವ ಕಲಬುರಗಿ ನಗರವು ಮುಂದಿನ ದಿನದಲ್ಲಿ ದೇಶದ ಭವಿಷ್ಯದ ನಗರವಾಗಿ ರೂಪಗೊಳ್ಳಲಿದೆ. ಇದಕ್ಕೆ 10 ಸಾವಿರ ಕೋಟಿ ರೂ. ಹೂಡಿಕೆಯ ಟೆಕ್ಸ್‍ಟೈಲ್ ಪಾರ್ಕ್ ಕೂಡ ಪ್ರದೇಶದ ಆರ್ಥಿಕತೆ ಚೇತರಿಕೆಗೆ ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಕಲಬುರಗಿ ನಗರದ ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ  ಭಾರತ ಸರ್ಕಾರದ ಜವಳಿ ಮಂತ್ರಾಲಯ ಮತ್ತು ರಾಜ್ಯದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಆಯೋಜಿಸಿದ ಕೇಂದ್ರ ಸರ್ಕಾರದ ಪಿಎಂ-ಮಿತ್ರ ಯೋಜನೆಯಡಿ ಮಂಜೂರಾಗಿರುವ ಕಲಬುರಗಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್‍ಗೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕಲಬುರಗಿ ಹಿಂದುಳಿದ ಪ್ರದೇಶ. ಪ್ರತಿ ವರ್ಷ ಇಲ್ಲಿಂದ ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಹೊರಡುವವರ ಸಂಖ್ಯೆ ಹೆಚ್ಚಿದೆ. ಅಲ್ಲಿ ಕಟ್ಟಡ ನಿರ್ಮಾಣದಂತಹ ಕೆಲಸದಲ್ಲಿ ಮಕ್ಕಳೊಂದಿಗೆ ಮಕ್ಕಳೊಂದಿಗೆ ಆ ತಾಯಂದಿರುವ ಬದುಕು ಕಟ್ಟಿಕೊಳ್ಳುವ ಜೀವನ ಕಂಡಿರುವೆ. ಇದು ತಪ್ಪಿಸುವುದು ಸವಾಲಿನ ಕೆಲಸವೇ ಆಗಿದೆ. ಇದಕ್ಕಾಗಿ ಸ್ಥಳೀಯವಾಗಿ ಉದ್ಯೋಗ ದೊರಕುವ ನಿಟ್ಟಿನಲ್ಲಿ ದೇಶದಾದ್ಯಂತ ಸ್ಥಾಪಿಸಲಾಗುತ್ತಿರುವ 7 ಟೆಕ್ಸ್‍ಟೈಲ್‍ನಲ್ಲಿ ಕಲಬುರಗಿ ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದು, ಇದು ಇಲ್ಲಿನ ಜನರ ಬದುಕಿಗೆ ಭದ್ರತೆ ಒದಗಿಸುವ ಮತ್ತು ಲಕ್ಷಾಂತರ ಜನರ ಬದುಕು ಬದಲಾಯಿಸುವ ಕೆಲಸವಾಗಲಿದೆ ಎಂದು ಸಂತಸದಿಂದ ನುಡಿದರು.

ದೇಶದಲ್ಲಿಯೇ ಮಾದರಿಯಾಗಿ ಉದ್ಯೋಗ ನೀತಿ ಜಾರಿಗೆ ತಂದ ರಾಜ್ಯ ನಮ್ಮದಾಗಿದೆ. ಜವಳಿ ಪಾರ್ಕ್‍ನಿಂದ ಕೆಲಸ ಸಿಗುವ ಪ್ರತಿ ಕಾರ್ಮಿಕನಿಗೆ 3,000 ರೂ. ಇನ್ಸೆನ್ಟಿವ್ ನೀಡಲಾಗುತ್ತಿದೆ. ಉದ್ಯಮಿಗಳು ಇಲ್ಲಿ ಬಂದು ಕೈಗಾರಿಕೆ ಸ್ಥಾಪಿಸಲು ಅನುಕೂಲವಾಗಲು ನೀರು, ವಿದ್ಯುತ್ ರಿಯಾಯಿತಿ ನೀಡಲಾಗಿದೆ. 1,000 ಎಕರೆ ಜಮೀನು ಕೇಂದ್ರಕ್ಕೆ ಉಚಿತ ನೀಡಲಾಗಿದೆ. ಹಿಂದೆಲ್ಲ ಕೆಟ್ಟ ನೀತಿ ಪರಿಣಾಮ ಇಲ್ಲಿನ ಎಂ.ಎಸ್.ಕೆ.ಮಿಲ್ ಸೇರಿದಂತೆ ರಾಜ್ಯದ ಅನೇಕ ಮಿಲ್ ಬಂದ್ ಆಗಿದ್ದವು ಎಂದು ನೆಪಿಸಿಕೊಂಡ ಅವರು ನಮ್ಮದು ಡಬಲ್ ಇಂಜಿನ್ ಸರ್ಕಾರವಾಗಿದ್ದು, ದೂರದೃಷ್ಠಿಯ ಯೋಜನೆ ಇದಾಗಿದೆ. ಮುಂದಿನ 10 ವರ್ಷದಲ್ಲಿ ಕಲಬುರಗಿ ದೇಶದ ಪ್ರಮುಖ ನಗರದಲ್ಲಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

25 ಮಿನಿ ಜವಳಿ ಪಾರ್ಕ್: ಜವಳಿ ಕ್ಷೇತ್ರವು ಹೆಚ್ಚಿನ ಉದ್ಯೋಗ ನೀಡುವ ಕ್ಷೇತ್ರವಾಗಿದ್ದರಿಂದ ಕಲಬುರಗಿ ಮೆಗಾ ಟೆಕ್ಸ್‍ಟೈಲ್ಸ್ ಹೊರತುಪಡಿಸಿ ರಾಜ್ಯ ಸರ್ಕಾರವು ರಾಯಚೂರು ಮತ್ತು ವಿಜಯಪುರದಲ್ಲಿ ಟೆಕ್ಸ್‍ಟೈಲ್ ಪಾರ್ಕ್ ಮತ್ತು 25 ಜಿಲ್ಲಾ ಕೇಂದ್ರದಲ್ಲಿ ಮಿನಿ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪಿಸಲು ಈಗಾಗಲೆ ಆಯವ್ಯಯದಲ್ಲಿ ಘೋಷಿಸಿದ್ದು, ಮಹಾತ್ಮ ಗಾಂಧಿ ಅವರ ಆಶಯದಂತೆ ಬೃಹತ್ ಉತ್ಪಾದನೆ ಬದಲಾಗಿ ಹೆಚ್ಚಿನ ಜನರಿಂದ ಉತ್ಪಾದನೆ ತತ್ವ ಅಳವಡಿಸಿಕೊಂಡಿದ್ದೇವೆ ಎಂದರು.

ಗೇಮ್ ಚೇಂಜರ್: ವರ್ತುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತ ಸಾರ್ವಜನಿಕ ಸರಬರಾಜು ಹಾಗೂ ಜವಳಿ ಖಾತೆ ಸಚಿವ ಪಿಯುಶ್ ಗೋಯಲ್ ಅವರು ಮಾತನಾಡಿ ಕಲಬುರಗಿಯಲ್ಲಿ ತಲೆ ತ್ತಲಿರುವ ಟೆಕ್ಸ್‍ಟೈಲ್ ಪಾರ್ಕ್ ಪ್ರದೇಶದ ಅಭಿವೃದ್ಧಿಗೆ ಗೇಮ್ ಚೇಂಜರ್ ಆಗಲಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 3 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ. ಜವಳಿ ಕ್ಷೇತ್ರದಲ್ಲಿ ಭಾರತವು ಜಾಗತೀಕವಾಗಿ ಸ್ಪರ್ಧೆಯೊಡ್ಡಿದೆ ಎಂದರು.

10 ಸಾವಿರ ಕೋಟಿ ರೂ. ಹೂಡಿಕೆ: ಕೇಂದ್ರದ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ವಿ. ಜರ್ದೋಶ್ ಮಾತನಾಡಿ, ದೇಶದಾದ್ಯಂತ 12 ರಾಜ್ಯಗಳಿಂದ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಬಂದಿದ್ದು, ಈ ಪೈಕಿ ಕಲಬುರಗಿ ಸೇರಿದಂತೆ 7 ಕಡೆ ಸ್ಥಾಪಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಮೋದಿಸಿದೆ. ಕೇಂದ್ರದಿಂದ ಈ 7 ಟೆಕ್ಸ್‍ಟೈಲ್ಸ್ ಪಾರ್ಕ್‍ಗಳಿಗೆ ತಲಾ 800 ಕೋಟಿ ರೂ. ಗಳಂತೆ 2027-28ರ ವರೆಗೆ ಒಟ್ಟಾರೆ 4,400 ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗುತ್ತದೆ. ಕಲಬುರಗಿಯಲ್ಲಿ 10 ಸಾವಿರ ಕೋಟಿ ರೂ. ಹೂಡಿಕೆಯ ನಿರೀಕ್ಷೆ ಇದ್ದು, ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ 3 ಲಕ್ಷ ಉದ್ಯೋಗ ಸ್ಥಳೀಯರಿಗೆ ಸಿಗಲಿದೆ ಎಂದರು.

ವಂದೇ ಭಾರತ್ ರೈಲು ಕಲಬುರಗಿಗೆ ವಿಸ್ತರಿಸಿ: ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಿ. ಜಾಧವ ಮಾತನಾಡಿ, ಈ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿರುವುದರಿಂದ ಉದ್ಯೋಗ ನೀಡಲು ಇಲ್ಲಿಗೆ ಜವಳಿ ಪಾರ್ಕ್ ಬಂದಿರುವುದು ಸಂತಸವಾಗಿದೆ. ಮುಂಬೈ-ಸೋಲಾಪೂರ ನಡುವೆ ಘೋಷಿಸಿರುವ ವಂದೇ ಭಾರತ್ ರೈಲು ಕಲಬುರಗಿ ವರೆಗೂ ವಿಸ್ತರಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನ ವಿ. ಜರ್ದೋಶ್ ಅವರಿಗೆ ಮನವಿ ಮಾಡಿದರು.

1,900 ಕೋಟಿ ರೂ. ಹೂಡಿಕೆಗೆ ಒಪ್ಪಂದ: ಇದೇ ಸಂದರ್ಭದಲ್ಲಿ ಶಾಹಿ ಎಕ್ಸ್‍ಪೋರ್ಟ್ ಮತ್ತು ಹೀಮತ್‍ಸಿಂಗ್ಕಾ ಸೈಡ್ ಲಿ. ಕಂಪನಿ ತಲಾ 500 ಕೋಟಿ ರೂ., ಟೆಕ್ಸ್‍ಪೋರ್ಟ್ ಇಂಡಸ್ಟ್ರಿ, ಕೆ.ಪಿ.ಆರ್.ಮಿಲ್ಸ್ ಲಿ. ಹಾಗೂ ಪ್ರತಿಭಾ ಸಿಂಟೆಕ್ಸ್ ಕಂಪನಿಯು ತಲಾ 200 ಕೋಟಿ ರೂ., ಗೋಕುಲದಾಸ್ ಎಕ್ಸ್‍ಪೋಟ್ಸ್ ಮತ್ತು ಇಂಡಿಯನ್ ಡಿಸೈನ್ಸ್ ಕಂಪನಿಯು ತಲಾ 100 ಕೋಟಿ ರೂ. ಹಾಗೂ ಸೂರ್ಯವಂಶಿ ಪ್ರೈ.ಲಿ ಮತ್ತು ಸೋನಲ್ ಅಪ್ಪಾರೆಲ್ಸ್ ಲಿ. ಕಂಪನಿಯು ತಲಾ 50 ಕೋಟಿ ರೂ. ಹೂಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಕ್ಷಮದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಎಂ.ಓ.ಯು ವಿನಿಮಯ ಮಾಡಿಕೊಂಡರು.

ಕೈಮಗ್ಗ ಮತ್ತು ಜವಳಿ ಹಾಗೂ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಮಾತನಾಡಿ ಪ್ರದೇಶದಲ್ಲಿ ಹತ್ತಿ ಬೆಳೆಯುವ ರೈತರ ಆರ್ಥಿಕ ಅಭಿವೃದ್ಧಿಗೆ ಟೆಕ್ಸ್‍ಟೈಲ್ ಪಾರ್ಕ್ ವರದಾನವಾಗಲಿದೆ ಎಂದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ ಆರ್. ನಿರಾಣಿ ಮಾತನಾಡಿ, 51 ಲಕ್ಷ ಟನ್ ಸುಣ್ಣದ ಕಲ್ಲು ಹೊಂದಿರುವ ಮತ್ತು 31 ಲಕ್ಷ ಟನ್ ಹತ್ತಿ ಬೆಳೆಯುವ ಕಲಬುರಗಿಯಲ್ಲಿ ಈ ಪಾರ್ಕ್ ಅಭಿವೃದ್ಧಿಯ ಹೊಸ ಭಾಷೆ ಬರೆಯಲಿದೆ. ರಾಜ್ಯ ಸರ್ಕಾರ ಶೇ.50 ರಷ್ಟು ಉದ್ಯಮಿಗಳಿಗೆ ಸಬ್ಸಿಡಿ ನೀಡುತ್ತಿದ್ದು, ಸ್ಥಳೀಯರೇ ಉದ್ಯಮ ಸ್ಥಾಪಿಸಿ ಇಲ್ಲಿನವರಿಗೆ ಉದ್ಯೋಗ ನೀಡಲು ಮುಂದಾಗಬೇಕೆಂದು ಕರೆ ನೀಡಿದರು.

ಕಲಬುರಗಿ ದಕ್ಷಿಣ ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ವಿಧಾನಸಭೆ ಶಾಸಕರುಗಳಾದ  ಸುಭಾಷ ಆರ್. ಗುತ್ತೇದಾರ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕರುಗಳಾದ ಸುನೀಲ್ ವಲ್ಲ್ಯಾಪುರೆ, ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ಧÀರ್ಗಿ, ಉಪ ಮಹಾಪೌರರಾದ ಶಿವಾನಂದ ಡಿ. ಪಿಸ್ತಿ, ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಟಿ.ಎಚ್.ಎಮ್.ಕುಮಾರ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ ಆರ್., ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಉದ್ಯಮಿಗಳು, ಅಧಿಕಾರಿಗಳು ಇದ್ದರು.

ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಕಾರ್ಯದರ್ಶಿ ರಚನಾ μÁ ಅವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ (ಎಂ.ಎಸ್.ಎಂ.ಇ, ಗಣಿ ಹಾಗೂ ಜವಳಿ) ಸರ್ಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here